
ಚಟ್ಟೋಗ್ರಾಮ್ನಲ್ಲಿ ನಡೆದ ಬಾಂಗ್ಲಾದೇಶ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಯುವ ಬ್ಯಾಟರ್ ಇಶಾನ್ ಕಿಶನ್ ದ್ವಿಶತಕ ಬಾರಿಸಿದರೆ, ಹಿರಿಯ ಆಟಗಾರ ವಿರಾಟ್ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದರು.

91 ಎಸೆತಗಳನ್ನು ಎದುರಿಸಿದ್ದ ಕಿಂಗ್ ಕೊಹ್ಲಿ 2 ಭರ್ಜರಿ ಸಿಕ್ಸರ್ ಹಾಗೂ 11 ಫೋರ್ನೊಂದಿಗೆ 113 ರನ್ ಕಲೆಹಾಕಿ ಔಟಾದರು. ಆದರೆ ಈ ಶತಕದೊಂದಿಗೆ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಬರೆದಿರುವುದು ವಿಶೇಷ. ಆ ದಾಖಲೆಗಳಾವುವು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...

ಅತ್ಯಧಿಕ ಶತಕ: ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಧಿಕ ಶತಕ ಬಾರಿಸಿದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ಇದೀಗ ವಿರಾಟ್ ಕೊಹ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಇದಕ್ಕೂ ಮುನ್ನ 71 ಶತಕ ಬಾರಿಸಿದ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ 2ನೇ ಸ್ಥಾನದಲ್ಲಿದ್ದರು. ಇದೀಗ 72 ಶತಕ ಬಾರಿಸಿ ವಿರಾಟ್ ಕೊಹ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.

ಬಾಂಗ್ಲಾ ವಿರುದ್ಧ ಅತ್ಯಧಿಕ ರನ್: ಬಾಂಗ್ಲಾದೇಶ್ ತಂಡದ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ಭಾರತೀಯ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೂ ಕಿಂಗ್ ಕೊಹ್ಲಿ ಪಾತ್ರರಾಗಿದ್ದಾರೆ. ಕೊಹ್ಲಿ ಬಾಂಗ್ಲಾ ವಿರುದ್ಧ 1000 ರನ್ ಪೂರೈಸುವ ಮೂಲಕ ಈ ಸಾಧನೆ ಮಾಡಿದ್ದಾರೆ.

ಅತ್ಯಧಿಕ ಫೋರ್: ಏಕದಿನ ಕ್ರಿಕೆಟ್ನಲ್ಲಿ ಅತ್ಯಧಿಕ ಫೋರ್ ಬಾರಿಸಿದ ಪಟ್ಟಿಯಲ್ಲಿದ್ದ ಆಸ್ಟ್ರೇಲಿಯಾದ ಆ್ಯಡಂ ಗಿಲ್ಕ್ರಿಸ್ಟ್ (1,162) ಅವರನ್ನು ವಿರಾಟ್ ಕೊಹ್ಲಿ ಹಿಂದಿಕ್ಕಿದ್ದಾರೆ. ಅಲ್ಲದೆ 1,172 ಫೋರ್ನೊಂದಿಗೆ ಅತ್ಯಧಿಕ ಫೋರ್ ಬಾರಿಸಿದ ವಿಶ್ವದ ಐದನೇ ಬ್ಯಾಟ್ಸ್ಮನ್ ಆಗಿ ಹೊರಹೊಮ್ಮಿದ್ದಾರೆ.

ಕಡಿಮೆ ಇನಿಂಗ್ಸ್ ದಾಖಲೆ: ಬಾಂಗ್ಲಾ ವಿರುದ್ಧದ ಶತಕದೊಂದಿಗೆ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ 44 ಸೆಂಚುರಿ ಪೂರೈಸಿದ್ದಾರೆ. ವಿಶೇಷ ಎಂದರೆ ಸಚಿನ್ ತೆಂಡೂಲ್ಕರ್ಗಿಂತ ಕಡಿಮೆ ಇನಿಂಗ್ಸ್ಗಳಲ್ಲಿ ಕೊಹ್ಲಿ ಈ ದಾಖಲೆ ನಿರ್ಮಿಸಿದ್ದಾರೆ. ಸಚಿನ್ ತೆಂಡೂಲ್ಕರ್ ತಮ್ಮ 418ನೇ ಇನ್ನಿಂಗ್ಸ್‌ನಲ್ಲಿ 44ನೇ ಏಕದಿನ ಶತಕ ದಾಖಲಿಸಿದರೆ, ವಿರಾಟ್ ಕೊಹ್ಲಿ 256ನೇ ಇನಿಂಗ್ಸ್ನಲ್ಲೇ ಈ ಸಾಧನೆ ಮಾಡಿದ್ದಾರೆ.
Published On - 4:59 pm, Sat, 10 December 22