
ಏಕದಿನ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿಯ (Virat Kohli) ದರ್ಬಾರ್ ಮುಂದುವರೆದಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಕೊನೆಯ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ಕಿಂಗ್ ಕೊಹ್ಲಿ ಇದೀಗ ಸೌತ್ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದಾರೆ. ಈ ಶತಕದೊಂದಿಗೆ ಭರ್ಜರಿ ದಾಖಲೆಯನ್ನು ಸಹ ಬರೆದಿದ್ದಾರೆ.

ರಾಂಚಿಯಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ 120 ಎಸೆತಗಳಲ್ಲಿ 11 ಫೋರ್ ಹಾಗೂ 7 ಸಿಕ್ಸರ್ನೊಂದಿಗೆ ಬರೋಬ್ಬರಿ 135 ರನ್ ಚಚ್ಚಿದ್ದರು. ಈ ಭರ್ಜರಿ ಶತಕದೊಂದಿಗೆ ಒಂದೇ ಸ್ವರೂಪದಲ್ಲಿ ಅತ್ಯಧಿಕ ಸೆಂಚುರಿ ಸಿಡಿಸಿದ ವಿಶ್ವ ದಾಖಲೆಯೊಂದನ್ನು ತಮ್ಮದಾಗಿಸಿಕೊಂಡರು.

ಅಂದರೆ ಏಕದಿನ, ಟೆಸ್ಟ್ ಹಾಗೂ ಟಿ20 ಅಂತಾರಾಷ್ಟ್ರೀಯ ಪಂದ್ಯಗಳ ಸ್ವರೂಪಗಳಲ್ಲಿ ಅತೀ ಹೆಚ್ಚು ಶತಕ ಸಿಡಿಸಿದ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಟೆಸ್ಟ್ನಲ್ಲಿ ಬರೋಬ್ಬರಿ 51 ಶತಕ ಸಿಡಿಸಿ ಈ ದಾಖಲೆ ಬರೆದಿದ್ದರು.

ಸೌತ್ ಆಫ್ರಿಕಾ ವಿರುದ್ಧ ಸೆಂಚುರಿ ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಂದೇ ಸ್ವರೂಪದಲ್ಲಿ ಅತ್ಯಧಿಕ ಶತಕ ಬಾರಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಿಂಗ್ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ 52 ಸೆಂಚುರಿ ಬಾರಿಸಿ ಸಚಿನ್ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನು ಮುರಿದಿದ್ದಾರೆ.

ವಿಶೇಷ ಎಂದರೆ ವಿರಾಟ್ ಕೊಹ್ಲಿ ಬಾರಿಸಿದ ಈ ಶತಕವು ಅಂತಾರಾಷ್ಟ್ರೀಯ ಕ್ರಿಕೆಟ್ನ 7000ನೇ ಸೆಂಚುರಿ. ಅಂದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಈವರೆಗೆ ಒಟ್ಟು 7 ಸಾವಿರ ಶತಕಗಳು ಮೂಡಿಬಂದಿವೆ. ಇದರಲ್ಲಿ 7000ನೇ ಶತಕ ಬಾರಿಸಿದ್ದು ವಿರಾಟ್ ಕೊಹ್ಲಿ. ಹೀಗಾಗಿಯೇ ರಾಂಚಿಯಲ್ಲಿ ಕಿಂಗ್ ಕೊಹ್ಲಿ ಬಾರಿಸಿದ ಶತಕ ವಿಶೇಷ ದಾಖಲೆ ಪಟ್ಟಿಗೆ ಸೇರ್ಪಡೆಯಾಗಿದೆ.