ಭಾರತದ ವಿರುದ್ಧ ಮಾಲ್ಡೀವ್ಸ್ ಸಚಿವರು ಮಾಡಿರುವ ಕಾಮೆಂಟ್‌ಗಳಿಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗರು ಸರಿಯಾದ ತಿರುಗೇಟು ನೀಡಿದ್ದಾರೆ. ಮಾಲ್ಡೀವ್ಸ್ ಸಚಿವರು ಭಾರತದ ವಿರುದ್ಧ ಈ ರೀತಿಯ ಹೇಳಿಕೆ ನೀಡಿರುವುದನ್ನು ವಿರೋಧಿಸಿರುವ ಮಾಜಿ ಕ್ರಿಕೆಟಿಗರು ತಮ್ಮ ಎಕ್ಸ್ ಖಾತೆಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಮಾಲ್ಡೀವ್ಸ್ ವರ್ಸಸ್ ಲಕ್ಷದ್ವೀಪ ವಿಚಾರದ ಬಗ್ಗೆ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್, ‘ಭಾರತದಲ್ಲೇ ಅತಿಸುಂದರವಾದ ದ್ವೀಪಗಳಿವೆ. ಅವುಗಳನ್ನೇ ಅಭಿವೃದ್ಧಿಪಡಿಸಬಹುದು. ಭಾರತದಲ್ಲಿ ಸುಂದರ ಕರಾವಳಿ ಮತ್ತು ಪ್ರಾಚೀನ ದ್ವೀಪಗಳಿವೆ. ನಮ್ಮ ಅತಿಥಿ ದೇವೋ ಭವ ತತ್ವದಂತೆ ನಾವು ಸಾಕಷ್ಟು ಸ್ಥಳಗಳನ್ನು ನೋಡಬೇಕಿದೆ. ಸಾಕಷ್ಟು ನೆನಪುಗಳು ಸೃಷ್ಟಿಯಾಗಲು ನಮಗಾಗಿ ಕಾಯುತ್ತಿವೆ ಎಂದು ಬರೆದುಕೊಂಡಿದ್ದಾರೆ.
ಸಚಿನ್ರಂತೆ ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಕೂಡ ಎಕ್ಸ್ ಮಾಡಿದ್ದು, ‘ಉಡುಪಿಯ ಸುಂದರ ಕಡಲತೀರಗಳು, ಪಾಂಡಿಯ ಪ್ಯಾರಡೈಸ್ ಬೀಚ್, ಅಂಡಮಾನ್‌ನ ನೀಲ್ ಮತ್ತು ಹ್ಯಾವ್‌ಲಾಕ್ ಅದ್ಭುತವಾಗಿದೆ. ನಮ್ಮ ದೇಶವು ಸುಂದರವಾದ ಕಡಲತೀರಗಳು ಮತ್ತು ಅನೇಕ ಅನ್ವೇಷಿಸದ ಸ್ಥಳಗಳನ್ನು ಹೊಂದಿದೆ. ವಿಶೇಷವಾಗಿ ಕೆಲವು ಮೂಲಸೌಕರ್ಯಗಳನ್ನು ಒದಗಿಸಿದರೆ ಇವು ಪ್ರವಾಸಿಗರನ್ನು ಆಕರ್ಷಿಸುತ್ತವೆ. ನಮ್ಮ ದೇಶ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಲ್ಡೀವ್ಸ್ ಸಚಿವರು ಮಾಡಿರುವ ಟೀಕೆಗಳಿಗೆ ಸರಿಯಾದ ಟಕ್ಕರ್ ನೀಡಬೇಕೆಂದರೆ ಇಂತಹ ಪ್ರವಾಸಿ ಪ್ರದೇಶಗಳಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಒದಗಿಸಬೇಕು ಎಂದಿದ್ದಾರೆ.
ನಾನು 15 ವರ್ಷ ವಯಸ್ಸಿನಿಂದಲೂ ಪ್ರಪಂಚದಾದ್ಯಂತ ಪ್ರಯಾಣಿಸುತ್ತಿದ್ದೇನೆ. ಪ್ರತಿ ದೇಶದಲ್ಲಿ, ಭಾರತೀಯ ಹೋಟೆಲ್ ಮತ್ತು ಪ್ರವಾಸೋದ್ಯಮ ಇಲಾಖೆಯು ಒದಗಿಸುವ ಸೇವೆಗಳು ಅತ್ಯುತ್ತಮವಾಗಿವೆ. ಅವರು ಆಯಾ ದೇಶಗಳ ಸಂಸ್ಕೃತಿಯನ್ನು ಗೌರವಿಸುತ್ತಾರೆ. ಈಗ ಕೆಲವರು ಭಾರತದ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡುತ್ತಿರುವುದು ಬೇಸರ ತಂದಿದೆ. ನನ್ನ ಮಾತೃಭೂಮಿಯ ಆತಿಥ್ಯ ಯಾವಾಗಲೂ ಉತ್ತಮವಾಗಿದೆ ಎಂದು ಟೀಂ ಇಂಡಿಯಾದ ಮಾಜಿ ವೇಗಿ ಇರ್ಫಾನ್ ಪಠಾಣ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಮಾಲ್ಡೀವ್ಸ್‌ನ ಸಾರ್ವಜನಿಕ ಪ್ರತಿನಿಧಿಗಳು ಮಾಡಿದ ಕಾಮೆಂಟ್‌ಗಳು ನೋವಿನ ಸಂಗತಿಯಾಗಿದೆ. ನಾನೂ ಕೂಡ ಹಲವು ಬಾರಿ ಅಲ್ಲಿಗೆ ಭೇಟಿ ನೀಡಿದ್ದೇನೆ. ಅಲ್ಲಿನ ಸೌಂದರ್ಯ ಬೆರಗು ಮೂಡಿಸುತ್ತದೆ. ಈಗ ನಮ್ಮ ಸ್ವಾಭಿಮಾನಕ್ಕೆ ಆದ್ಯತೆ ನೀಡುವುದು ಬಹಳ ಮುಖ್ಯ. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದ ನಂತರ ನಮ್ಮ ಪ್ರವಾಸೋದ್ಯಮ ಕ್ಷೇತ್ರವನ್ನು ಬೆಂಬಲಿಸುವ ಅಗತ್ಯವಿದೆ ಎಂದು ಸುರೇಶ್ ರೈನಾ ಅಭಿಪ್ರಾಯಪಟ್ಟಿದ್ದಾರೆ.
ಭಾರತ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾಲ್ಡೀವ್ಸ್‌ನ ಕೆಲವು ಸಚಿವರು ಮಾಡಿದ ವಿವಾದಾತ್ಮಕ ಕಾಮೆಂಟ್‌ಗಳ ಬಗ್ಗೆ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಭಾರತೀಯ ದ್ವೀಪಗಳು ವಿದೇಶಿ ಸ್ಥಳಗಳಿಗೆ ಬದಲಾಗಿ ಜನರಿಗೆ ಉತ್ತಮ ರಜೆಯ ಸ್ಥಳಗಳಾಗಿವೆ. ಮುಂದಿನ ರಜೆಯಲ್ಲಿ ನಾವು ಲಕ್ಷದ್ವೀಪಕ್ಕೆ ಹೋಗುವುದಾಗಿ ಹಾರ್ದಿಕ್ ಪಾಂಡ್ಯ ಬರೆದುಕೊಂಡಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿ ಒಂದಷ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದರು. ಇದಾದ ಬಳಿಕ ಲಕ್ಷದ್ವೀಪವು ಆನ್ಲೈನ್ನಲ್ಲಿ ಸಾಕಷ್ಟು ಟ್ರೇಡಿಂಗ್ ಆಗಿತ್ತು. ಈ ಘಟನೆ ಬಗ್ಗೆ ಮಾಲ್ಡೀವ್ಸ್‌ನ ಕೆಲ ಸಚಿವರು ಹಾಗೂ ಸಂಸದರು ಮತ್ತಿತರರು ಕೆಟ್ಟದಾಗಿ ಪ್ರತಿಕ್ರಿಯಿಸಿದ್ದರು. ನರೇಂದ್ರ ಮೋದಿ ಮತ್ತು ಭಾರತೀಯರ ಬಗ್ಗೆ ಲೇವಡಿ ಮಾಡಿದ್ದರು. ಭಾರತದಿಂದ ಆಕ್ಷೇಪ ವ್ಯಕ್ತವಾದ ಬಳಿಕ ಮಾಲ್ಡೀವ್ಸ್ ಸರ್ಕಾರ ಮೂವರು ಸಚಿವರನ್ನು ಅಮಾನತುಗೊಳಿಸಿದೆ.
Published On - 5:35 pm, Mon, 8 January 24