17 ಸಿಕ್ಸ್ಗಳೊಂದಿಗೆ ದಾಖಲೆಯ ಶತಕ ಸಿಡಿಸಿದ ವಿಷ್ಣು ವಿನೋದ್
Vishnu Vinod: ವಿಷ್ಣು ವಿನೋದ್ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದರು. ಐಪಿಎಲ್ 2017 ರಲ್ಲಿ ಆರ್ಸಿಬಿ ತಂಡದಲ್ಲಿದ್ದ ವಿಷ್ಣು, ಆ ಬಳಿಕ ಡೆಲ್ಲಿ ಕ್ಯಾಪಿಟಲ್ಸ್, ಸನ್ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದಿದ್ದಾರೆ. ಇದೀಗ ಕೆಸಿಎಲ್ ಟಿ20 ಲೀಗ್ನಲ್ಲಿ ಸ್ಪೋಟಕ ಬ್ಯಾಟಿಂಗ್ನೊಂದಿಗೆ ಅಬ್ಬರಿಸಿದ್ದಾರೆ.
Updated on: Sep 17, 2024 | 9:04 AM

ತಿರುವನಂತಪುರದಲ್ಲಿ ನಡೆಯುತ್ತಿರುವ ಕೇರಳ ಕ್ರಿಕೆಟ್ ಲೀಗ್ ಟಿ20 ಟೂರ್ನಿಯಲ್ಲಿ ವಿಷ್ಣು ವಿನೋದ್ ದಾಖಲೆಯ ಶತಕ ಸಿಡಿಸಿದ್ದಾರೆ. ಅದು ಸಹ ಕೇವಲ 32 ಎಸೆತಗಳಲ್ಲಿ ಎಂಬುದು ವಿಶೇಷ. ಗ್ರೀನ್ಫೀಲ್ಡ್ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ತ್ರಿಶೂರ್ ಟೈಟಾನ್ಸ್ ಹಾಗೂ ಅಲೆಪ್ಪಿ ರಿಪ್ಪಲ್ಸ್ ತಂಡಗಳು ಮುಖಾಮುಖಿಯಾಗಿದ್ದವು.

ಈ ಪಂದ್ಯದಲ್ಲಿ ಟಾಸ್ ಜಯಿಸಿದ ತ್ರಿಶೂರ್ ಟೈಟಾನ್ಸ್ ತಂಡವು ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಅಲೆಪ್ಪಿ ರಿಪ್ಪಲ್ಸ್ ಪರ ನಾಯಕ ಮೊಹಮ್ಮದ್ ಅಝರುದ್ದೀನ್ 53 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 90 ರನ್ ಸಿಡಿಸಿದರು. ಇನ್ನು ಕೃಷ್ಣ ಪ್ರಸಾದ್ 43 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಅಲೆಪ್ಪಿ ರಿಪ್ಪಲ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 181 ರನ್ ಕಲೆಹಾಕಿತು.

182 ರನ್ಗಳ ಕಠಿಣ ಗುರಿ ಬೆನ್ನತ್ತಿದ ತ್ರಿಶೂರ್ ಟೈಟಾನ್ಸ್ ತಂಡಕ್ಕೆ ಆರಂಭಿಕ ಆಟಗಾರ ವಿಷ್ಣು ವಿನೋದ್ ಸ್ಪೋಟಕ ಆರಂಭ ಒದಗಿಸಿದರು. ಮೊದಲ ಓವರ್ನಿಂದಲೇ ಅಬ್ಬರಿಸಲಾರಂಭಿಸಿದ ವಿಷ್ಣು, ಅಲೆಪ್ಪಿ ಬೌಲರ್ಗಳ ಬೆಂಡೆತ್ತುವ ಮೂಲಕ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಪರಿಣಾಮ ವಿಷ್ಣು ವಿನೋದ್ ಬ್ಯಾಟ್ನಿಂದ ಕೇವಲ 32 ಎಸೆತಗಳಲ್ಲಿ ಶತಕ ಮೂಡಿಬಂತು.

ಈ ಶತಕದ ಬಳಿಕವು ಆರ್ಭಟ ಮುಂದುವರೆಸಿದ ವಿಷ್ಣು ವಿನೋದ್ 45 ಎಸೆತಗಳಲ್ಲಿ 17 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 139 ರನ್ ಚಚ್ಚಿದರು. ಈ ಸ್ಪೋಟಕ ಸೆಂಚುರಿ ನೆರವಿನಿಂದ ತ್ರಿಶೂರ್ ಟೈಟಾನ್ಸ್ ತಂಡವು 12.4 ಓವರ್ಗಳಲ್ಲಿ 187 ರನ್ ಬಾರಿಸಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.

ವಿಶೇಷ ಎಂದರೆ 32 ಎಸೆತಗಳಲ್ಲಿ ಸೆಂಚುರಿ ಸಿಡಿಸುವ ಮೂಲಕ ವಿಷ್ಣು ವಿನೋದ್ ಟಿ20 ಕ್ರಿಕೆಟ್ನಲ್ಲಿ ಸ್ಪೋಟಕ ಶತಕ ಬಾರಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ರಿಷಭ್ ಪಂತ್ ಹೆಸರಿನಲ್ಲಿತ್ತು. 2018 ರ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಪಂತ್ 32 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದರು. ಇದೀಗ ಈ ದಾಖಲೆಯನ್ನು ವಿಷ್ಣು ವಿನೋದ್ ಸರಿಗಟ್ಟಿದ್ದಾರೆ.

ಅಂದಹಾಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತದ ಪರ ಅತೀ ವೇಗದ ಶತಕ ಸಿಡಿಸಿದ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ. 2017 ರಲ್ಲಿ ಶ್ರೀಲಂಕಾ ವಿರುದ್ಧ ಹಿಟ್ಮ್ಯಾನ್ 35 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದರು. ಈ ಮೂಲಕ ಟೀಮ್ ಇಂಡಿಯಾ ಪರ ಅತ್ಯಂತ ವೇಗದ ಶತಕ ಬಾರಿಸಿದ ದಾಖಲೆ ನಿರ್ಮಿಸಿದ್ದಾರೆ.



















