Updated on: Aug 16, 2022 | 7:22 AM
ಭಾರತ ಕ್ರಿಕೆಟ್ ತಂಡ ಜಿಂಬಾಬ್ವೆ ನಾಡಿಗೆ ತೆರಳಿದ್ದು ಕೆಎಲ್ ರಾಹುಲ್ ನೇತೃತ್ವದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಈಗಾಗಲೇ ಹರಾರೆಯಲ್ಲಿ ಕೋಚ್ ವಿವಿಎಸ್ ಲಕ್ಷ್ಮಣ್ ಮಾರ್ಗದರ್ಶದಡಿಯಲ್ಲಿ ಆಟಗಾರರು ಪ್ರ್ಯಾಕ್ಟೀಸ್ ಮಾಡುತ್ತಿದ್ದಾರೆ. ಹೀಗಿರುವಾಗ ಟೀಮ್ ಇಂಡಿಯಾಕ್ಕೆ ದೊಡ್ಡ ಆಘಾತ ಉಂಟಾಗಿದೆ.
ಟೀಮ್ ಇಂಡಿಯಾ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಇಂಜುರಿಯಿಂದಾಗಿ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ.
ಸುಂದರ್ ಇಂಗ್ಲೆಂಡ್ ನಲ್ಲಿ ರಾಯಲ್ ಲಂಡನ್ ಒನ್ ಡೇ ಚಾಂಪಿಯನ್ ಷಿಪ್ ಮ್ಯಾಚ್ ನಲ್ಲಿ ಲ್ಯಾಂಚೆಶೈರ್ ತಂಡದ ಪರ ಕಳೆದ ವಾರ ಆಡುತ್ತಿದ್ದಾಗ ವೋರ್ಸೆಸ್ಟರ್‌ಶೈರ್ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದರು. ಫೀಲ್ಡಿಂಗ್ ಮಾಡಲಾಗದೆ ಪಂದ್ಯದ ನಡುವೆಯೇ ಮೈದಾನ ತೊರೆದಿದ್ದರು.
ಸುಂದರ್ ಅನೇಕ ತಿಂಗಳುಗಳ ಬಳಿಕ ಟೀಮ್ ಇಂಡಿಯಾಕ್ಕೆ ಆಯ್ಕೆಯಾಗುವ ಮೂಲಕ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಸ್ಥಾನ ಪಡೆದುಕೊಂಡಿದ್ದರು. ಆದರೆ, ಇದೀಗ ಗಾಯದ ಪ್ರಮಾಣ ದೊಡ್ಡದಾಗಿದ್ದು ಜಿಂಬಾಬ್ವೆ ಸರಣಿಯಿಂದ ಹೊರಬಿದ್ದಿದ್ದಾರೆ ಎಂದು ಬಿಸಿಸಿಐ ಮೂಲಗಳು ಪಿಟಿಐಗೆ ತಿಳಿಸಿದೆ. ಒಂದು ವಾರಗಳ ಕಾಲ ವಿಶ್ರಾಂತಿಯ ಅಗತ್ಯವಿದೆ ಎಂದು ಹೇಳಲಾಗಿದೆ.
ಇನ್ನು ಭಾರತ ತಂಡವು 6 ವರ್ಷಗಳ ಬಳಿಕ ಜಿಂಬಾಬ್ವೆ ನಾಡಿಗೆ ತೆರಳುತ್ತಿದೆ. ಈ ಹಿಂದೆ ಎಂಎಸ್ ಧೋನಿ ನೇತೃತ್ವದ ತಂಡವು 2016 ರಲ್ಲಿ ಮೂರು ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಜಿಂಬಾಬ್ವೆಯಲ್ಲಿ ಆಡಿತ್ತು. ಈ ಎರಡೂ ಸರಣಿಯಲ್ಲಿ ಅಂದು ಭಾರತ ತಂಡ ಗೆಲುವು ದಾಖಲಿಸಿತ್ತು. ಇದೀಗ 6 ವರ್ಷಗಳ ಬಳಿಕ ಭಾರತ ತಂಡವು ಜಿಂಬಾಬ್ವೆ ಪ್ರವಾಸ ಕೈಗೊಳ್ಳುತ್ತಿದೆ.
ಸುದೀರ್ಘ ಗಾಯದ ನಂತರ ದೀಪಕ್ ಚಹಾರ್ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಮಿಂಚು ಹರಿಸಿದ್ದ ರಾಹುಲ್ ತ್ರಿಪಾಠಿಗೆ ಅವಕಾಶ ನೀಡಲಾಗಿದೆ.
ಐಸಿಸಿ ಸೂಪರ್ ಲೀಗ್ ಭಾಗವಾಗಿ ಮೂರು ಏಕದಿನ ಪಂದ್ಯಗಳ ಸರಣಿ ನಡೆಯಲಿವೆ. ಉಭಯ ತಂಡಗಳ ನಡುವೆ ಹರಾರೆ ಮೈದಾನದಲ್ಲಿ ಆಗಸ್ಟ್ 18, 20 ಹಾಗೂ 22ರಂದು ಪಂದ್ಯಗಳು ನಡೆಯಲಿವೆ. ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ ನ ಭಾಗವಾಗಿ ಈ ಸರಣಿ ನಡೆಯಲಿದ್ದು, ವಿಶ್ವಕಪ್ ಗೆ ನೇರ ಅರ್ಹತೆ ಪಡೆದುಕೊಳ್ಳಲು ಜಿಂಬಾಬ್ವೆಗೆ ಈ ಸರಣಿ ಮಹತ್ವ ಪಡೆದುಕೊಂಡಿದೆ. ಐಸಿಸಿ ಲೀಗ್ ಶ್ರೇಯಾಂಕದಲ್ಲಿ ಜಿಂಬಾಬ್ವೆ ಪ್ರಸ್ತುತ 12ನೇ ಸ್ಥಾನದಲ್ಲಿದೆ.
ಭಾರತ ತಂಡ: ಕೆಎಲ್ ರಾಹುಲ್ (ನಾಯಕ) ಶಿಖರ್ ಧವನ್ (ಉಪ ನಾಯಕ), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಅವೇಶ್ ಖಾನ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್ , ದೀಪಕ್ ಚಹಾರ್.