
ಇಂಗ್ಲೆಂಡ್ ವಿರುದ್ಧದ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ 311 ರನ್‌ಗಳ ಹಿನ್ನಡೆ ಅನುಭವಿಸಿದ್ದರೂ, ಟೀಂ ಇಂಡಿಯಾ ಬಲವಾದ ಕಮ್‌ಬ್ಯಾಕ್ ಮಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿತು. ನಾಯಕ ಶುಭ್ಮನ್ ಗಿಲ್ ಮತ್ತು ಕೆಎಲ್ ರಾಹುಲ್ ನಡುವಿನ 188 ರನ್‌ಗಳ ಪಾಲುದಾರಿಕೆ ಈ ಪುನರಾಗಮನಕ್ಕೆ ಅಡಿಪಾಯ ಹಾಕಿದರೆ, ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಇಂಗ್ಲೆಂಡ್‌ನ ಮುನ್ನಡೆಯನ್ನು ಕೊನೆಗೊಳಿಸಿ ತಂಡಕ್ಕೆ ಮುನ್ನಡೆಯನ್ನು ನೀಡಿದರು.

ಇಡೀ ಸರಣಿಯಲ್ಲಿ ರವೀಂದ್ರ ಜಡೇಜಾ ಬೌಲಿಂಗ್ನಲ್ಲಿ ಅಷ್ಟು ಯಶಸ್ವಿಯಾಗದಿದ್ದರೂ, ತಮ್ಮ ಬ್ಯಾಟಿಂಗ್‌ನಿಂದ ಹೋರಾಟದ ಪ್ರದರ್ಶನವನ್ನು ತೋರಿಸಿದ್ದಾರೆ. ಲಾರ್ಡ್ಸ್‌ನಲ್ಲಿ ಗೆಲುವಿಗಾಗಿ ಹೋರಾಡಿದ ಜಡ್ಡು, ಇದೀ ಮ್ಯಾಂಚೆಸ್ಟರ್ನಲ್ಲಿ ಸುಂದರ್ ಜೊತೆಗೂಡಿ ತಂಡವನ್ನು ಸೋಲಿನಿಂದ ಪಾರು ಮಾಡಿದ್ದಾರೆ.

ಈ ವೇಳೆ ಇಬ್ಬರು ಆಟಗಾರರು ಅರ್ಧಶತಕದ ಇನ್ನಿಂಗ್ಸ್ ಕೂಡ ಆಡಿದ್ದಾರೆ. ಅದರಲ್ಲೂ ಜಡೇಜಾಗೆ ಉತ್ತಮ ಸಾಥ್ ನೀಡಿದ ವಾಷಿಂಗ್ಟನ್ ಸುಂದರ್ ಸುಮಾರು 4 ವರ್ಷಗಳ ಬರವನ್ನು ಕೊನೆಗೂ ನೀಗಿಸಿಕೊಂಡಿದ್ದಾರೆ. ರಾಹುಲ್ ವಿಕೆಟ್ ಬಳಿಕ ಬ್ಯಾಟಿಂಗ್ಗೆ ಬಂದ ಸುಂದರ್, ಗಿಲ್ ಜೊತೆ ಇನ್ನಿಂಗ್ಸ್ ಕಟ್ಟಿದರು. ಗಿಲ್ ಔಟಾದ ಬಳಿಕ, ಜಡೇಜಾ ಜೊತೆಗೆ ಸ್ಮರಣೀಯ ಇನ್ನಿಂಗ್ಸ್ ಆಡುತ್ತಿದ್ದಾರೆ.

ಹಾಗೆಯೇ ಬೆನ್ ಸ್ಟೋಕ್ಸ್ ಓವರ್‌ನಲ್ಲಿ ಸತತ ಎಸೆತಗಳಲ್ಲಿ ಸಿಕ್ಸರ್ ಮತ್ತು ಬೌಂಡರಿ ಬಾರಿಸುವ ಮೂಲಕ ಸುಂದರ್ ಅರ್ಧಶತಕವನ್ನು ಪೂರೈಸಿದರು. ಈ ರೀತಿಯಾಗಿ, 1605 ದಿನಗಳ ನಂತರ, ಸುಂದರ್ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಅರ್ಧಶತಕ ಬಾರಿಸಿದರು. ಇದಕ್ಕೂ ಮೊದಲು, ಅವರು ಮಾರ್ಚ್ 5, 2021 ರಂದು ಅಹಮದಾಬಾದ್‌ನಲ್ಲಿ ಈ ತಂಡದ ವಿರುದ್ಧ 96 ರನ್‌ಗಳ (ಅಜೇಯ) ಇನ್ನಿಂಗ್ಸ್ ಆಡಿದ್ದರು.

ಇದು ಸುಂದರ್ ಅವರ ಟೆಸ್ಟ್ ವೃತ್ತಿಜೀವನದಲ್ಲಿ ಐದನೇ ಅರ್ಧಶತಕವಾಗಿದ್ದು, ಈ ಪೈಕಿ ಇಂಗ್ಲೆಂಡ್ ವಿರುದ್ಧ ಮೂರನೇ ಬಾರಿಗೆ ಈ ಸಾಧನೆ ಮಾಡಿದ್ದಾರೆ. ಸುಂದರ್ ಮಾತ್ರವಲ್ಲದೆ, ಜಡೇಜಾ ಕೂಡ ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರೆಸಿ ಈ ಟೆಸ್ಟ್ ಸರಣಿಯಲ್ಲಿ ಐದನೇ ಬಾರಿಗೆ ಐವತ್ತರ ಗಡಿ ದಾಟಿದರು. ಇವರಿಬ್ಬರ ಜೊತೆಯಾಟದಿಂದಾಗಿ ಟೀಂ ಇಂಡಿಯಾ ಈ ಪಂದ್ಯದಲ್ಲಿ ಮುನ್ನಡೆಯನ್ನು ಪಡೆದುಕೊಂಡಿದೆ.