
ಟಿ20 ಕ್ರಿಕೆಟ್ ಇತಿಹಾಸದಲ್ಲಿ ಯಾರಿಂದಲೂ ಸಾಧ್ಯವಾಗದ ವಿಶೇಷ ವಿಶ್ವ ದಾಖಲೆ ಬರೆದಿದ್ದಾರೆ ವೆಸ್ಟ್ ಇಂಡೀಸ್ನ ಕೀರನ್ ಪೊಲಾರ್ಡ್ (Kieron Pollard). ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ನಡೆದ ಬಾರ್ಡೋಸ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಪೊಲಾರ್ಡ್ 19 ರನ್ ಬಾರಿಸಿದ್ದರು. ಈ 19 ರನ್ಗಗಳೊಂದಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ 14 ಸಾವಿರ ರನ್ ಕಲೆಹಾಕಿದ 2ನೇ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಕೀರನ್ ಪೊಲಾರ್ಡ್ ತಮ್ಮದಾಗಿಸಿಕೊಂಡಿದ್ದಾರೆ.

ಇದರ ಜೊತೆಗೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ 14 ಸಾವಿರ ರನ್ ಹಾಗೂ 300 ವಿಕೆಟ್ ಕಬಳಿಸಿದ ವಿಶ್ವ ಏಕೈಕ ಆಟಗಾರ ಎಂಬ ವಿಶ್ವ ದಾಖಲೆಯನ್ನು ಕೀರನ್ ಪೊಲಾರ್ಡ್ ನಿರ್ಮಿಸಿದ್ದಾರೆ. ಅಂದರೆ ಟಿ20 ಕ್ರಿಕೆಟ್ನಲ್ಲಿ 9 ಬ್ಯಾಟರ್ಗಳು 12 ಸಾವಿರಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ. ಹಾಗೆಯೇ 30 ಬೌಲರ್ಗಳು 300 ಕ್ಕೂ ಹೆಚ್ಚು ವಿಕೆಟ್ ಕಬಳಿಸಿದ್ದಾರೆ.

ಆದರೆ 14 ಸಾವಿರ ರನ್ಗಳ ಜೊತೆ 300 ವಿಕೆಟ್ ಕಬಳಿಸಿರುವುದು ಕೀರನ್ ಪೊಲಾರ್ಡ್ ಮಾತ್ರ. ಈ ಮೂಲಕ ಚುಟುಕು ಕ್ರಿಕೆಟ್ ಇತಿಹಾಸದಲ್ಲೇ ಯಾರಿಂದಲೂ ಸಾಧ್ಯವಾಗದ ಅಪರೂಪದ ವರ್ಲ್ಡ್ ರೆಕಾರ್ಡ್ ಬರೆಯುವಲ್ಲಿ ಪೊಲಾರ್ಡ್ ಯಶಸ್ವಿಯಾಗಿದ್ದಾರೆ.

ಇನ್ನು ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಗಳಿಸಿರುವುದ ವೆಸ್ಟ್ ಇಂಡೀಸ್ನ ಸ್ಫೋಟಕ ದಾಂಡಿಗ ಕ್ರಿಸ್ ಗೇಲ್. ಟಿ20 ಕ್ರಿಕೆಟ್ನಲ್ಲಿ 455 ಇನಿಂಗ್ಸ್ ಆಡಿರುವ ಗೇಲ್ 10060 ಎಸೆತಗಳನ್ನು ಎದುರಿಸಿ ಒಟ್ಟು 14562 ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದ ರನ್ ಸರದಾರ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

ಹಾಗೆಯೇ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ವಿಕೆಟ್ ಕಬಳಿಸಿದ ವಿಶ್ವ ದಾಖಲೆ ಅಫ್ಘಾನಿಸ್ತಾನದ ರಶೀದ್ ಖಾನ್ ಹೆಸರಿನಲ್ಲಿದೆ. 483 ಟಿ20 ಇನಿಂಗ್ಸ್ ಗಳಲ್ಲಿ ಬೌಲಿಂಗ್ ಮಾಡಿರುವ ರಶೀದ್ ಖಾನ್ ಈವರೆಗೆ 660 ವಿಕೆಟ್ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಟಿ20 ಇತಿಹಾಸದಲ್ಲೇ 650+ ವಿಕೆಟ್ ಪಡೆದ ಏಕೈಕ ಬೌಲರ್ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.

ಇದೀಗ ಆಲ್ರೌಂಡರ್ ಪ್ರದರ್ಶನದೊಂದಿಗೆ ಟಿ20 ಕ್ರಿಕೆಟ್ನಲ್ಲಿ 14 ಸಾವಿರ ರನ್ + 300 ವಿಕೆಟ್ ಪಡೆದ ವಿಶ್ವದ ಏಕೈಕ ಆಟಗಾರನಾಗಿ ಕೀರನ್ ಪೊಲಾರ್ಡ್ ಹೊರಹೊಮ್ಮಿದ್ದಾರೆ. ಅಷ್ಟೇ ಅಲ್ಲದೆ ಇನ್ನು 563 ರನ್ಗಳಿಸಿದರೆ ಟಿ20 ರನ್ ಸರದಾರರ ಪಟ್ಟಿಯಲ್ಲೂ ಅಗ್ರಸ್ಥಾನಕ್ಕೇರಲಿದ್ದಾರೆ.
Published On - 9:04 am, Sun, 31 August 25