
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿ ಮುಗಿದಿದೆ. ಮೂರು ಪಂದ್ಯಗಳ ಈ ಸರಣಿಯ ಮೊದಲೆರಡು ಮ್ಯಾಚ್ನಲ್ಲಿ ಆಸ್ಟ್ರೇಲಿಯಾ ತಂಡ ಜಯ ಸಾಧಿಸಿದರೆ, ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ದಾಖಲಿಸಿದೆ. ಇನ್ನು ಉಭಯ ತಂಡಗಳು ಟಿ20 ಸರಣಿ ಆಡಲಿದೆ.

ಇತ್ತ ಟೀಮ್ ಇಂಡಿಯಾ ದಿಗ್ಗಜರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಇಬ್ಬರು ಕಾಣಿಸಿಕೊಳ್ಳುವುದಿಲ್ಲ. ಹೀಗಾಗಿ ರೋ-ಕೊ ಜೋಡಿ ಟೀಮ್ ಇಂಡಿಯಾ ಪರ ಮತ್ತೆ ಕಣಕ್ಕಿಳಿಯುವುದು ಯಾವಾಗ ಎಂಬ ಪ್ರಶ್ನೆ ಮೂಡುವುದು ಸಹಜ.

ಈ ಪ್ರಶ್ನೆಗೆ ಉತ್ತರ... ನವೆಂಬರ್ ತಿಂಗಳಾಂತ್ಯದಲ್ಲಿ. ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಸರಣಿಯು ನವೆಂಬರ್ನಲ್ಲಿ ಶುರುವಾಗಲಿದೆ. ಈ ಸರಣಿಯಲ್ಲಿ ಮೂರು ಏಕದಿನ ಪಂದ್ಯಗಳನ್ನಾಡಲಾಗುತ್ತದೆ. ಅದರಂತೆ ನವೆಂಬರ್ 30 ರಂದು ನಡೆಯಲಿರುವ ಮೊದಲ ಪಂದ್ಯದ ಮೂಲಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮತ್ತೆ ಟೀಮ್ ಇಂಡಿಯಾ ಪರ ಕಣಕ್ಕಿಳಿಯಲಿದ್ದಾರೆ.

ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಮೊದಲ ಏಕದಿನ ಪಂದ್ಯವು ನವೆಂಬರ್ 30 ರಂದು ನಡೆದರೆ, ದ್ವಿತೀಯ ಮ್ಯಾಚ್ ಡಿಸೆಂಬರ್ 3 ರಂದು ಜರುಗಲಿದೆ. ಹಾಗೆಯೇ ಮೂರನೇ ಪಂದ್ಯವು ಡಿಸೆಂಬರ್ 6 ರಂದು ನಡೆಯಲಿದೆ. ಇದಾದ ಬಳಿಕ ಟೀಮ್ ಇಂಡಿಯಾ ಜನವರಿಯಲ್ಲಿ ನ್ಯೂಝಿಲೆಂಡ್ ವಿರುದ್ಧ ಸರಣಿ ಆಡಲಿದೆ.

ಅಂದರೆ ರೋ-ಕೊ ಜೋಡಿಯ ಆರ್ಭಟವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳಲು ಮುಂದಿನ ತಿಂಗಳಾಂತ್ಯದವರೆಗೆ ಕಾಯಲೇಬೇಕು. ಅದು ಕೂಡ ಬಲಿಷ್ಠ ಸೌತ್ ಆಫ್ರಿಕಾ ವಿರುದ್ಧ. ಹೀಗಾಗಿ ಮುಂದಿನ ಮೂರು ಪಂದ್ಯಗಳಲ್ಲೂ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕಡೆಯಿಂದ ಭರ್ಜರಿ ಪ್ರದರ್ಶನವನ್ನು ನಿರೀಕ್ಷಿಸಬಹುದು.