
ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಟೆಸ್ಟ್ ಸರಣಿಯು ಶುಕ್ರವಾರದಿಂದ (ನ.14) ಶುರುವಾಗಲಿದೆ. ಈ ಸರಣಿಗೆ ಆಯ್ಕೆಯಾಗಿದ್ದ ಟೀಮ್ ಇಂಡಿಯಾದ ಯುವ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿಯನ್ನು ಮೊದಲ ಪಂದ್ಯಕ್ಕೂ ಮುನ್ನ ತಂಡದಿಂದ ಕೈ ಬಿಡಲಾಗಿದೆ.

ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಮ್ಯಾಚ್ಗೂ ಮುನ್ನ ನಿತೀಶ್ ಕುಮಾರ್ ರೆಡ್ಡಿ ಅವರನ್ನು ತಂಡದಿಂದ ಕೈ ಬಿಟ್ಟಿದ್ದೇಕೆ? ಎಂಬ ಪ್ರಶ್ನೆ ಮೂಡುವುದು ಸಹಜ. ಇದಕ್ಕೆ ಮುಖ್ಯ ಕಾರಣ ಪ್ಲೇಯಿಂಗ್ ಇಲೆವೆನ್ನಿಂದ ಹೊರಗಿಟ್ಟಿರುವುದು.

ಮೊದಲ ಟೆಸ್ಟ್ ಪಂದ್ಯದ ಪ್ಲೇಯಿಂಗ್ ಇಲೆವೆನ್ನಲ್ಲಿ ಧ್ರುವ್ ಜುರೆಲ್ ಸ್ಥಾನ ಪಡೆಯಲಿದ್ದಾರೆ. ಸೌತ್ ಆಫ್ರಿಕಾ 'ಎ' ವಿರುದ್ಧದ ಪಂದ್ಯಗಳಲ್ಲಿ ಜುರೆಲ್ ಎರಡು ಅಜೇಯ ಶತಕಗಳನ್ನು ಬಾರಿಸಿದ್ದರು. ಹೀಗಾಗಿ ಸೌತ್ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ.

ಅಷ್ಟೇ ಅಲ್ಲದೆ ಈಡನ್ ಗಾರ್ಡನ್ಸ್ ಮೈದಾನವು ಸ್ಪಿನ್ ಸ್ನೇಹಿ ಪಿಚ್ ಹೊಂದಿರಲಿದೆ ಎಂಬ ಮಾಹಿತಿ ಕೂಡ ಹೊರಬಿದ್ದಿದೆ. ಅದರಂತೆ ಆಲ್ರೌಂಡರ್ ಗಳಾಗಿ ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ಹಾಗೂ ಅಕ್ಷರ್ ಪಟೇಲ್ ಕಣಕ್ಕಿಳಿಯುವ ಸಾಧ್ಯತೆಯಿದೆ.

ಇತ್ತ ಮೂವರು ಸ್ಪಿನ್ ಆಲ್ರೌಂಡರ್ಗಳನ್ನು ಕಣಕ್ಕಿಳಿಸಿದರೆ ನಿತೀಶ್ ಕುಮಾರ್ ರೆಡ್ಡಿ ಬೆಂಚ್ ಕಾಯಬೇಕಾಗುತ್ತದೆ. ಹೀಗಾಗಿ ಅವರನ್ನು ತಂಡದಿಂದ ಬಿಡುಗಡೆ ಮಾಡಲಾಗಿದ್ದು, ಭಾರತ ಎ ಮತ್ತು ಸೌತ್ ಆಫ್ರಿಕಾ ಎ ನಡುವಣ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯುವಂತೆ ಸೂಚಿಸಲಾಗಿದೆ. ಈ ಮೂಲಕ ಫಿಟ್ನೆಸ್ ಕಾಯ್ದುಕೊಳ್ಳುವಂತೆ ತಿಳಿಸಲಾಗಿದೆ.

ಭಾರತ ಟೆಸ್ಟ್ ತಂಡ: ಶುಭ್ಮನ್ ಗಿಲ್ (ನಾಯಕ), ರಿಷಭ್ ಪಂತ್ (ಉಪನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಆಕಾಶ್ ದೀಪ್.