
ಸುಮಾರು ಒಂದು ತಿಂಗಳ ಹಿಂದೆ, ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಇಡೀ ತಿಂಗಳು ಬ್ಯಾಟ್ ಹಿಡಿಯಲಿಲ್ಲ ಎಂದು ಹೇಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದರು. ಕೊಹ್ಲಿ ಬಳಿಕ ಇದೀಗ ಭಾರತ ಮಹಿಳಾ ತಂಡದ ಬಲಿಷ್ಠ ಬ್ಯಾಟರ್ ಜೆಮಿಮಾ ರೋಡ್ರಿಗಸ್ ಕೂಡ ಸುಮಾರು ಒಂದೂವರೆ ತಿಂಗಳ ಕಾಲ ಬ್ಯಾಟ್ ಹಿಡಿಯದೇ, ತಂಡಕ್ಕೆ ಮರಳಿದ ಕೂಡಲೇ ಅಬ್ಬರಿಸಿದ್ದಾರೆ.

ಅಕ್ಟೋಬರ್ 1, ಶನಿವಾರದಂದು ಮಹಿಳೆಯರ ಏಷ್ಯಾಕಪ್‌ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ, ಭಾರತದ ಬ್ಯಾಟರ್ ಜೆಮಿಮಾ 76 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದರು. 53 ಎಸೆತಗಳನ್ನು ಎದುರಿಸಿದ ಜೆಮಿಮಾ ತಮ್ಮ T20 ವೃತ್ತಿಜೀವನದ ಅತಿದೊಡ್ಡ ಸ್ಕೋರ್ ಗಳಿಸಿದರು.

ಈ ವೇಳೆ ಜೆಮಿಮಾ ಕೇವಲ 12 ಎಸೆತಗಳಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 50 ರನ್ ಗಳಿಸಿದರು. ಈ ಇನ್ನಿಂಗ್ಸ್ ಆಧಾರದ ಮೇಲೆ ಭಾರತ ತಂಡ ಕಳಪೆ ಆರಂಭದ ನಂತರವೂ 150 ರನ್ ಗಳಿಸಿತು. ಈ ಅವಧಿಯಲ್ಲಿ ಹರ್ಮನ್‌ಪ್ರೀತ್ ಕೌರ್ ಜೊತೆ ಜೆಮಿಮಾ 92 ರನ್ ಜೊತೆಯಾಟ ನಡೆಸಿದರು.

ವಿಶೇಷವೆಂದರೆ ಸುಮಾರು ಒಂದೂವರೆ ತಿಂಗಳ ನಂತರ ಜೆಮಿಮಾ ತಂಡಕ್ಕೆ ಮರಳಿದ್ದಾರೆ. ಆಗಸ್ಟ್‌ನಲ್ಲಿ ಇಂಗ್ಲೆಂಡ್‌ನಲ್ಲಿ ನಡೆದ ದಿ ಹಂಡ್ರೆಡ್ ಟೂರ್ನಮೆಂಟ್‌ನಲ್ಲಿ ಜೆಮಿಮಾ ಕೈಗೆ ಗಾಯ ಮಾಡಿಕೊಂಡಿದ್ದರು. ಇದರಿಂದಾಗಿ ಅವರು ಮೈದಾನದಿಂದ ಹೊರಗುಳಿಯಬೇಕಾಯಿತು. ಇದರಿಂದಾಗಿ ಅವರು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯನ್ನೂ ಆಡಲಾಗಲಿಲ್ಲ.

ಶ್ರೀಲಂಕಾ ವಿರುದ್ಧ ಅದ್ಭುತ ಇನ್ನಿಂಗ್ಸ್ ಆಡಿದ ಜೆಮಿಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಪ್ರಶಸ್ತಿ ಪಡೆದು ಮಾತನಾಡಿದ ಜೆಮಿಮಾ, ಗಾಯದಿಂದಾಗಿ 6 ವಾರಗಳ ಕಾಲ ಬ್ಯಾಟ್ ಹಿಡಿಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮತ್ತೆ ಬ್ಯಾಟಿಂಗ್ ಮಾಡಲು ಚಡಪಡಿಸುವಂತ್ತಾಗಿತ್ತು ಎಂದು ಹೇಳುವ ಮೂಲಕ ಜೆಮಿಮಾ ಎಲ್ಲರನ್ನು ಅಚ್ಚರಿಗೊಳಿಸಿದ್ದರು.
Published On - 7:05 pm, Sat, 1 October 22