- Kannada News Photo gallery Cricket photos India vs Australia: Smriti Mandhana, Pratika Rawal's Historic 155 Run World Cup Stand
World Cup 2025: 52 ವರ್ಷಗಳ ಹಳೆಯ ದಾಖಲೆ ಮುರಿದ ಮಂಧಾನ, ಪ್ರತೀಕಾ ಜೋಡಿ
Smriti Mandhana, Pratika Rawal: ಭಾರತ-ಆಸ್ಟ್ರೇಲಿಯಾ ಮಹಿಳಾ ವಿಶ್ವಕಪ್ ಪಂದ್ಯದಲ್ಲಿ, ಸ್ಮೃತಿ ಮಂಧಾನ ಮತ್ತು ಪ್ರತಿಕಾ ರಾವಲ್ 155 ರನ್‌ಗಳ ಐತಿಹಾಸಿಕ ಆರಂಭಿಕ ಜೊತೆಯಾಟ ನೀಡಿ 52 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್ ಇತಿಹಾಸದಲ್ಲಿ 150ಕ್ಕೂ ಹೆಚ್ಚು ರನ್‌ಗಳ ಪಾಲುದಾರಿಕೆ ನೀಡಿದ ಮೊದಲ ಆರಂಭಿಕ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದು ಇಬ್ಬರ ಆರನೇ ಶತಕದ ಪಾಲುದಾರಿಕೆಯಾಗಿದೆ.
Updated on: Oct 12, 2025 | 7:44 PM

ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025 ರ 13ನೇ ಪಂದ್ಯದಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ವನಿತಾ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಆರಂಭಿಕ ಜೋಡಿಯಾದ ಸ್ಮೃತಿ ಮಂಧಾನ ಹಾಗೂ ಪ್ರತಿಕಾ ರಾವಲ್ ಉತ್ತಮ ಆರಂಭ ಒದಗಿಸಿಕೊಟ್ಟರು.

ಇವರಿಬ್ಬರು ಮೊದಲ ವಿಕೆಟ್‌ಗೆ 155 ರನ್‌ಗಳ ಅದ್ಭುತ ಪಾಲುದಾರಿಕೆಯನ್ನು ಹಂಚಿಕೊಂಡರು. ಇದರೊಂದಿಗೆ, ಮಂಧಾನ ಮತ್ತು ಪ್ರತಿಕಾ ಆಸ್ಟ್ರೇಲಿಯಾ ವಿರುದ್ಧ ನಿರ್ಮಿಸಲಾದ 52 ವರ್ಷಗಳ ಹಳೆಯ ವಿಶ್ವಕಪ್ ದಾಖಲೆಯನ್ನು ಮುರಿದಿದ್ದು, ಇಂಗ್ಲೆಂಡ್‌ನ ಬೇಕ್‌ವೆಲ್ ಮತ್ತು ಥಾಮಸ್ ಅವರ ಜೊತೆಯಾಟದ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಭಾರತದ ವಿರುದ್ಧದ ಈ ಪಂದ್ಯಕ್ಕೂ ಮೊದಲು, ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡದ ವಿರುದ್ಧ ಅತ್ಯಧಿಕ ಆರಂಭಿಕ ಪಾಲುದಾರಿಕೆಯ ದಾಖಲೆಯನ್ನು ಇಂಗ್ಲೆಂಡ್‌ನ ಬೇಕ್‌ವೆಲ್ ಮತ್ತು ಥಾಮಸ್ ಹೊಂದಿದ್ದರು, ಅವರು ಮೊದಲ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ 106 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡಿದ್ದರು. ಈಗ, ಸ್ಮೃತಿ ಮಂಧಾನ ಮತ್ತು ಪ್ರತಿಕಾ ರಾವಲ್ 52 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.

ಹಾಗೆಯೇ ಮಹಿಳಾ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ವಿರುದ್ಧ 150 ಕ್ಕೂ ಹೆಚ್ಚು ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡ ಮೊದಲ ಆರಂಭಿಕ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದು ಮಂಧಾನ ಮತ್ತು ಪ್ರತಿಕಾ ಅವರ ಆರನೇ ಏಕದಿನ ಶತಕದ ಪಾಲುದಾರಿಕೆಯಾಗಿದ್ದು, ಮಿಥಾಲಿ ರಾಜ್ ಮತ್ತು ಪೂನಮ್ ರಾವತ್ ಅವರ ಏಳು ಶತಕದ ಪಾಲುದಾರಿಕೆಯ ದಾಖಲೆಯನ್ನು ಸರಿಗಟ್ಟಲು ಕೇವಲ ಒಂದು ಹೆಜ್ಜೆ ದೂರದಲ್ಲಿದ್ದಾರೆ.

ಸ್ಮೃತಿ ಮಂಧಾನ ಮತ್ತು ಪ್ರತಿಕಾ ರಾವಲ್ ಏಕದಿನದಲ್ಲಿ ಆರಂಭಿಕ ಜವಾಬ್ದಾರಿವಹಿಸಿಕೊಂಡ ನಂತರ ಬಹುತೇಕ ಪ್ರತಿಯೊಂದು ಪಂದ್ಯದಲ್ಲೂ ತಂಡಕ್ಕೆ ಘನ ಆರಂಭವನ್ನು ಒದಗಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ, ಇಬ್ಬರೂ ಆಟಗಾರ್ತಿಯರಿಗೆ ಶತಕಗಳನ್ನು ಗಳಿಸುವ ಅವಕಾಶವಿತ್ತು, ಆದರೆ ಸ್ಮೃತಿ 66 ಎಸೆತಗಳಲ್ಲಿ 80 ರನ್ ಗಳಿಸಿ ಔಟಾದರೆ, ಪ್ರತಿಕಾ 96 ಎಸೆತಗಳಲ್ಲಿ 75 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.




