Updated on: Dec 01, 2022 | 10:54 PM
ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಕಳೆದ ಜುಲೈನಲ್ಲಿ ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಇದಾಗ್ಯೂ ಅವರು ಟಿ20 ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದರು. ಅದರಂತೆ ಸದ್ಯ ಸ್ಟೋಕ್ಸ್ ಇಂಗ್ಲೆಂಡ್ ಟಿ20 ಹಾಗೂ ಟೆಸ್ಟ್ ತಂಡದ ಭಾಗವಾಗಿದ್ದಾರೆ. ಇದರ ನಡುವೆ ಏಕದಿನ ಕ್ರಿಕೆಟ್ಗೆ ಅವರು ಕಂಬ್ಯಾಕ್ ಮಾಡಬೇಕೆಂಬ ಅಭಿಪ್ರಾಯಗಳು ಕೇಳಿ ಬರಲಾರಂಭಿಸಿದೆ.
ಇದಕ್ಕೆ ಮುಖ್ಯ ಕಾರಣ ಟಿ20 ವಿಶ್ವಕಪ್ ಫೈನಲ್ನಲ್ಲಿ ಬೆನ್ ಸ್ಟೋಕ್ಸ್ ಆಡಿದ ಇನಿಂಗ್ಸ್. ಪಾಕ್ ವಿರುದ್ಧ ಜವಾಬ್ದಾರಿಯುತ ಅರ್ಧಶತಕ ಬಾರಿಸುವ ಮೂಲಕ ಸ್ಟೋಕ್ಸ್ ಇಂಗ್ಲೆಂಡ್ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದರು. ಇದಕ್ಕೂ ಮುನ್ನ 2019ರ ಏಕದಿನ ವಿಶ್ವಕಪ್ ಗೆಲುವಿನ ರುವಾರಿ ಕೂಡ ಬೆನ್ ಸ್ಟೋಕ್ಸ್.
ಅಂದರೆ ಆಂಗ್ಲರ ಪಾಲಿನ ಎರಡು ವಿಶ್ವಕಪ್ ಗೆಲುವಿನ ರುವಾರಿ ಎನಿಸಿಕೊಂಡಿರುವ ಬೆನ್ ಸ್ಟೋಕ್ಸ್ 2023 ರ ವಿಶ್ವಕಪ್ನಲ್ಲಿ ಕಾಣಿಸಿಕೊಳ್ಳಬೇಕೆಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ನ ಮ್ಯಾನೇಜಿಂಗ್ ಡೈರೆಕ್ಟರ್ ರಾಬ್ ಕಿ ಹಾಗೂ ಸೀಮಿತ ಓವರ್ಗಳ ಕೋಚ್ ಮ್ಯಾಥ್ಯೂ ಮೋಟ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಇಂಗ್ಲೆಂಡ್ ತಂಡದ ಮುಖ್ಯ ಕೋಚ್ ಮೋಟ್, ಬೆನ್ ಸ್ಟೋಕ್ಸ್ ಅಕ್ಟೋಬರ್ವರೆಗೆ ತಂಡದ ಪರ ಆಡಿದ್ದರೂ ಸಹ ನಾವು ವಿಶ್ವಕಪ್ ಬಳಗದಲ್ಲಿ ಆಯ್ಕೆ ಮಾಡಲು ಬಯಸುತ್ತೇವೆ. ಅಂದರೆ ಅವರಿಗೆ ತಂಡದಲ್ಲಿ ನೇರ ಸ್ಥಾನ ನೀಡಲಿದ್ದೇವೆ ಎಂದಿದ್ದಾರೆ. ಹೀಗಾಗಿ ಯಾವುದೇ ಸಮಯದಲ್ಲೂ ಬೆನ್ ಸ್ಟೋಕ್ಸ್ ತಂಡಕ್ಕೆ ಮರಳಬಹುದು.
ಈ ಬಗ್ಗೆ ಬೆನ್ ಸ್ಟೋಕ್ಸ್ ಕೂಡ ಮಾತನಾಡಿದ್ದು, ರಾಬ್ ಕಿ ನನ್ನೊಂದಿಗೆ ಏಕದಿನ ವಿಶ್ವಕಪ್ ಬಗ್ಗೆ ಮಾತನಾಡಿದ್ದಾರೆ. ಆದರೆ ನಾನಿನ್ನೂ ಏನನ್ನೂ ಹೇಳಿಲ್ಲ. ಪ್ರಸ್ತುತ ನನ್ನ ಗಮನವು ಸರಣಿ ಆಡುವುದರ ಮೇಲಿದೆ. ಹಾಗೆಯೇ ವಿಶ್ವಕಪ್ನಲ್ಲಿ ದೇಶವನ್ನು ಪ್ರತಿನಿಧಿಸುವುದು ಹೆಮ್ಮೆಯ ಸಂಗತಿ. ಆದರೆ ಸದ್ಯ ನಾನು ಅದರ ಬಗ್ಗೆ ಯೋಚಿಸುತ್ತಿಲ್ಲ ಎಂದು ಬೆನ್ ಸ್ಟೋಕ್ಸ್ ಬ್ರಿಟಿಷ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇಲ್ಲಿ ಗಮನಿಸಬೇಕಾದ ವಿಷಯ ಎಂದರೆ ಬೆನ್ ಸ್ಟೋಕ್ಸ್ ಕಂಬ್ಯಾಕ್ ಮಾಡುವುದಿಲ್ಲ ಎನ್ನದಿರುವುದು. ಅಂದರೆ ಸ್ಟೋಕ್ ಅತಿಯಾದ ಕ್ರಿಕೆಟ್ ಒತ್ತಡದ ಕಾರಣ ಏಕದಿನ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಇದೀಗ ಇಂಗ್ಲೆಂಡ್ ತಂಡದ ಕೋಚ್ ಮ್ಯಾಥ್ಯೂ ಮೋಟ್ ಸ್ಟೋಕ್ಸ್ ವಿಶ್ವಕಪ್ ಆಡುವುದಾದರೆ ಅವರಿಗೆ ನೇರವಾಗಿ ಚಾನ್ಸ್ ನೀಡಲಿದ್ದೇವೆ ಎಂದಿದ್ದಾರೆ.
ಹೀಗಾಗಿ ಬೆನ್ ಸ್ಟೋಕ್ಸ್ ಸಂಪೂರ್ಣ ವಿಶ್ರಾಂತಿಯೊಂದಿಗೆ ಏಕದಿನ ವಿಶ್ವಕಪ್ ವೇಳೆ ತಂಡಕ್ಕೆ ಮರಳಬಹುದು. ಇತ್ತ ಮುಂದಿನ ಐಪಿಎಲ್ ಸೀಸನ್ನಲ್ಲೂ ಸ್ಟೋಕ್ಸ್ ಕಣಕ್ಕಿಳಿಯುತ್ತಿದ್ದಾರೆ. ಇಲ್ಲಿ ಕುತೂಹಲಕಾರಿ ಸಂಗತಿಯೆಂದರೆ ಮುಂದಿನ ಏಕದಿನ ವಿಶ್ವಕಪ್ ನಡೆಯುವುದು ಭಾರತದಲ್ಲಿ.
ಅಂದರೆ ಐಪಿಎಲ್ ಮೂಲಕ ಭಾರತೀಯ ಪಿಚ್ನಲ್ಲಿ ಇಂಗ್ಲೆಂಡ್ ಆಲ್ರೌಂಡರ್ ತಯಾರಿ ಆರಂಭಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಅಕ್ಟೋಬರ್ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ವೇಳೆ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡದಲ್ಲಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.