
ವುಮೆನ್ಸ್ ಪ್ರೀಮಿಯರ್ ಲೀಗ್ (WPL 2024) ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಇನ್ನುಳಿದಿರುವುದು ಕೇವಲ 2 ಪಂದ್ಯಗಳು ಮಾತ್ರ. ಅಂದರೆ ಈಗಾಗಲೇ 3 ತಂಡಗಳು ನಾಕೌಟ್ ಹಂತಕ್ಕೇರಿದೆ. ನಾಕೌಟ್ ಹಂತದಲ್ಲಿ ಮೊದಲು ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಇದಾದ ಬಳಿಕ ಫೈನಲ್ ಪಂದ್ಯ ಜರುಗಲಿದೆ.

ಇಲ್ಲಿ ಐದು ತಂಡಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ನೇರವಾಗಿ ಫೈನಲ್ ಪ್ರವೇಶಿಸಿದೆ. ಅಂದರೆ ಲೀಗ್ ಹಂತದ ಮುಕ್ತಾಯದ ವೇಳೆಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸುವ ತಂಡ ಫೈನಲ್ಗೆ ಅರ್ಹತೆ ಪಡೆಯುತ್ತದೆ. ಅದರಂತೆ 8 ಪಂದ್ಯಗಳಲ್ಲಿ 6 ಗೆಲುವು ದಾಖಲಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ಅಗ್ರಸ್ಥಾನ ಅಲಂಕರಿಸಿ ಫೈನಲ್ಗೆ ಪ್ರವೇಶಿಸಿದೆ.

ಇನ್ನು 8 ಪಂದ್ಯಗಳಲ್ಲಿ 5 ಜಯ ಸಾಧಿಸಿರುವ ಮುಂಬೈ ಇಂಡಿಯನ್ಸ್ ತಂಡವು ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದರೆ, 8 ಮ್ಯಾಚ್ಗಳಲ್ಲಿ 4 ಗೆಲುವು ದಾಖಲಿಸಿರುವ ಆರ್ಸಿಬಿ ತೃತೀಯ ಸ್ಥಾನದಲ್ಲಿದೆ. ಅದರಂತೆ RCB ಮತ್ತು MI ತಂಡಗಳು ಎಲಿಮಿನೇಟರ್ ಪಂದ್ಯವನ್ನಾಡಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್ಗೆ ಪ್ರವೇಶಿಸಲಿದೆ.

ಎಲಿಮಿನೇಟರ್ ಪಂದ್ಯ: ಮಾರ್ಚ್ 15 ರಂದು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಎಲಿಮಿನೇಟರ್ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯ ರಾತ್ರಿ 7.30 ರಿಂದ ಶುರುವಾಗಲಿದೆ.

ಫೈನಲ್ ಪಂದ್ಯ: ಮಾರ್ಚ್ 17 ರಂದು ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಫೈನಲ್ ಪಂದ್ಯ ಜರುಗಲಿದೆ. ಭಾನುವಾರ ನಡೆಯಲಿರುವ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕಣಕ್ಕಿಳಿಯಲಿದೆ. ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ತಂಡ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಫೈನಲ್ ಫೈಟ್ನಲ್ಲಿ ಎದುರಿಸಲಿದೆ.