
ಮಹಿಳಾ ಪ್ರೀಮಿಯರ್ ಲೀಗ್ 2026 ರ ಮೆಗಾ ಹರಾಜು ಭರದಿಂದ ಆರಂಭವಾಗಿದೆ. ಈ ವರ್ಷ, ಮೆಗಾ ಹರಾಜು ನಡೆಯುತ್ತಿರುವುದರಿಂದ ಒಟ್ಟು 276 ಆಟಗಾರ್ತಿಯರನ್ನು ಬಿಡ್ ಮಾಡಲಾಗುತ್ತಿದ್ದು, 73 ಸ್ಥಾನಗಳು ಭರ್ತಿಯಾಗಬೇಕಿದೆ. ಈ ಹರಾಜಿನಲ್ಲಿ ಎಲ್ಲರ ಕಣ್ಣು 2ನೇ ಆವೃತ್ತಿಯ ಚಾಂಪಿಯನ್ ಆರ್‌ಸಿಬಿ ಮೇಲೆ ಇದ್ದು, ಪ್ರಸ್ತುತ ಆರ್‌ಸಿಬಿ ಟೀಂ ಇಂಡಿಯಾದ ಸ್ಟಾರ್ ಸ್ಪಿನ್ನರ್ ರಾಧಾ ಯಾದವ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

2026 ರ ಮಹಿಳಾ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಧಾ ಯಾದವ್ ಅವರನ್ನು 65 ಲಕ್ಷ ರೂಗಳಿಗೆ ಖರೀದಿಸಿದೆ. ಕಳೆದ ಮೂರು ಸೀಸನ್ಗಳಲ್ಲಿ ದೆಹಲಿ ಕ್ಯಾಪಿಟಲ್ಸ್ ಪರ ಆಡಿದ್ದ ರಾಧಾ ಈಗ ಆರ್‌ಸಿಬಿ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕುತೂಹಲಕಾರಿಯಾಗಿ, ಸ್ಮೃತಿ ಮಂಧಾನ ಆರ್‌ಸಿಬಿ ತಂಡದ ನಾಯಕಿ, ಅಂದರೆ ಇಬ್ಬರು ಆಪ್ತರು ಈಗ ಒಂದೇ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳಲಿದ್ದಾರೆ.

ಹರಾಜಿನಲ್ಲಿ ರಾಧಾ ಅವರ ಮೂಲ ಬೆಲೆ 30 ಲಕ್ಷ ರೂ ಆಗಿತ್ತು. ಗುಜರಾತ್ ಜೈಂಟ್ಸ್ ಆರಂಭಿಕ ಬಿಡ್ ಮಾಡಿತು, ಆದರೆ ಆರ್‌ಸಿಬಿ ಮತ್ತು ಗುಜರಾತ್ ನಡುವೆ ತೀವ್ರ ಪೈಪೋಟಿ ನಡೆಯಿತು. ಅಂತಿಮವಾಗಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಅವರನ್ನು 65 ಲಕ್ಷಕ್ಕೆ ಒಪ್ಪಂದ ಮಾಡಿಕೊಂಡಿತು. ರಾಧಾ ಅವರ ಸ್ಪಿನ್ ಬೌಲಿಂಗ್ ಮತ್ತು ಉಪಯುಕ್ತ ಕೆಳ ಕ್ರಮಾಂಕದ ಬ್ಯಾಟಿಂಗ್ ತಂಡವನ್ನು ಬಲಪಡಿಸುವುದರಿಂದ ಇದು ಆರ್‌ಸಿಬಿಗೆ ಉತ್ತಮ ಖರೀದಿ ಎಂದು ಪರಿಗಣಿಸಲಾಗಿದೆ.

ಸ್ಮೃತಿ ಮಂಧಾನ ಅವರ ನಾಯಕತ್ವದಲ್ಲಿ, ಆರ್‌ಸಿಬಿ 2024 ರ ಸೀಸನ್ನಲ್ಲಿ ಮೊದಲ ಬಾರಿಗೆ WPL ಪ್ರಶಸ್ತಿಯನ್ನು ಗೆದ್ದುಕೊಂಡಿತು. ರಾಧಾ ಯಾದವ್ ಆಗಮನವು ತಂಡದ ಸ್ಪಿನ್ ವಿಭಾಗವನ್ನು ಮತ್ತಷ್ಟು ಬಲಪಡಿಸಿದೆ. ಇಬ್ಬರು ಆಟಗಾರ್ತಿಯರು ಭಾರತೀಯ ತಂಡದಲ್ಲಿ ಒಟ್ಟಿಗೆ ಆಡುತ್ತಾರೆ. ರಾಧಾ ಯಾದವ್ 2025 ರ ವಿಶ್ವಕಪ್ ವಿಜೇತ ಭಾರತೀಯ ತಂಡದ ಭಾಗವಾಗಿದ್ದರು.

ರಾಧಾ ಯಾದವ್ ಇದುವರೆಗೆ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ 20 ಪಂದ್ಯಗಳನ್ನು ಆಡಿದ್ದು, 14 ವಿಕೆಟ್‌ಗಳನ್ನು ಪಡೆದಿದ್ದಾರೆ ಮತ್ತು 74 ರನ್ ಬಾರಿಸಿದ್ದಾರೆ. ಅವರು ಅದ್ಭುತ ಫೀಲ್ಡರ್ ಕೂಡ ಆಗಿದ್ದು, ಟೀಂ ಇಂಡಿಯಾ ಪರ 14 ಏಕದಿನ ಮತ್ತು 89 ಟಿ20ಐಗಳನ್ನು ಆಡಿದ್ದಾರೆ.