
2025 ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾವನ್ನು 5 ವಿಕೆಟ್‌ಗಳಿಂದ ಸೋಲಿಸಿ 27 ವರ್ಷಗಳ ನಂತರ ಐಸಿಸಿ ಈವೆಂಟ್‌ನ ಟ್ರೋಫಿಯನ್ನು ಗೆದ್ದುಕೊಂಡಿತು. ಈ ಫೈನಲ್‌ನಲ್ಲಿ, ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಐಡೆನ್ ಮಾರ್ಕ್ರಾಮ್ 136 ರನ್‌ಗಳ ಪಂದ್ಯ ಗೆಲ್ಲುವ ಇನ್ನಿಂಗ್ಸ್ ಆಡಿದರು.

ಮೊದಲ ಇನ್ನಿಂಗ್ಸ್‌ನಲ್ಲಿ ಖಾತೆ ತೆರೆಯಲು ವಿಫಲರಾಗಿದ್ದ ಐಡೆನ್ ಮಾರ್ಕ್ರಾಮ್, ಎರಡನೇ ಇನ್ನಿಂಗ್ಸ್‌ನಲ್ಲಿ ಆಸೀಸ್ ಬೌಲರ್ಗಳನ್ನು ಇನ್ನಿಲ್ಲದಂತೆ ಕಾಡಿದರು. ಈ ಶತಕದ ಇನ್ನಿಂಗ್ಸ್ ಮೂಲಕ ಮಾರ್ಕ್ರಾಮ್, ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ. ಪ್ರಾಸಂಗಿಕವಾಗಿ, ಈ ದಾಖಲೆಯನ್ನು ಕೂಡ 27 ವರ್ಷಗಳ ನಂತರ ಮುರಿಯಲಾಗಿದೆ.

ಐಡೆನ್ ಮಾರ್ಕ್ರಾಮ್ ಅವರ 136 ರನ್‌ಗಳ ಇನ್ನಿಂಗ್ಸ್ ಆಸ್ಟ್ರೇಲಿಯಾಕ್ಕೆ ಸದಾ ನೆನಪಾಗುತ್ತದೆ. ಏಕೆಂದರೆ ಇದು ಯಾವುದೇ ಸ್ವರೂಪದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಫೈನಲ್‌ನಲ್ಲಿ ದಾಖಲಾದ ಅತ್ಯಧಿಕ ವೈಯಕ್ತಿಕ ಸ್ಕೋರ್ ಆಗಿದೆ. ಈ ಮೊದಲು ಈ ದಾಖಲೆ 1998 ರಲ್ಲಿ ಶಾರ್ಜಾ ಕಪ್‌ನ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 134 ರನ್ ಗಳಿಸಿದ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿತ್ತು.

ಆ ಪಂದ್ಯದಲ್ಲಿ, ಸಚಿನ್ ತೆಂಡೂಲ್ಕರ್ ಅವರ ಈ ಶತಕದ ಇನ್ನಿಂಗ್ಸ್‌ನಿಂದ ಟೀಂ ಇಂಡಿಯಾ, ಆಸ್ಟ್ರೇಲಿಯಾ ತಂಡವವನ್ನು 6 ವಿಕೆಟ್‌ಗಳಿಂದ ಸೋಲಿಸಿತ್ತು. ಈಗ ಐಡೆನ್ ಮಾರ್ಕ್ರಾಮ್ ತಮ್ಮ ಶತಕದ ಇನ್ನಿಂಗ್ಸ್ ಮೂಲಕ ಆಸ್ಟ್ರೇಲಿಯಾ ವಿರುದ್ಧ ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ.

ಪಂದ್ಯದ ಬಗ್ಗೆ ಹೇಳುವುದಾದರೆ, ಈ ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 212 ರನ್ ಗಳಿಸಿತು, ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ 138 ರನ್‌ಗಳಿಗೆ ಆಲೌಟ್ ಆಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ನೀಡಿದ 282 ರನ್‌ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ಐದು ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು.

ಡಬ್ಲ್ಯುಟಿಸಿ ಫೈನಲ್‌ನಲ್ಲಿ ಶತಕ ಸಿಡಿಸುವ ಮೂಲಕ ಮಾರ್ಕ್ರಾಮ್, ಐಸಿಸಿ ಟೂರ್ನಮೆಂಟ್‌ನ ಫೈನಲ್‌ನಲ್ಲಿ ಶತಕ ಬಾರಿಸಿದ ಮೊದಲ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನು ಟೆಸ್ಟ್‌ನಲ್ಲಿ ಮಾರ್ಕ್ರಾಮ್ ಅವರ ಅಂಕಿಅಂಶಗಳನ್ನು ನೋಡುವುದಾದರೆ ಅವರು ಆಡಿರುವ 46 ಪಂದ್ಯಗಳಲ್ಲಿ 36.50 ಸರಾಸರಿ ಮತ್ತು 59.66 ಸ್ಟ್ರೈಕ್ ರೇಟ್‌ನಲ್ಲಿ 2993 ರನ್ ಗಳಿಸಿದ್ದಾರೆ. ಇದರಲ್ಲಿ 8 ಶತಕ ಮತ್ತು 13 ಅರ್ಧಶತಕಗಳು ಸೇರಿವೆ.