99 ವರ್ಷಗಳ ವಿಶ್ವ ದಾಖಲೆಯನ್ನೇ ಅಳಿಸಿ ಹಾಕಿದ ಟೆಂಬಾ ಬವುಮಾ
WTC 2025 Final: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಜಯ ಸಾಧಿಸಿ ಸೌತ್ ಆಫ್ರಿಕಾ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಚಾಂಪಿಯನ್ ಪಟ್ಟದೊಂದಿಗೆ ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆಯನ್ನು ಸಹ ನಿರ್ಮಿಸಿದ್ದಾರೆ. ಅದು ಕೂಡ 99 ವರ್ಷಗಳ ಹಳೆಯ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.
Updated on: Jun 15, 2025 | 9:04 AM

ಟೆಸ್ಟ್ ಕ್ರಿಕೆಟ್ನಲ್ಲಿ ಸೌತ್ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ (Temba Bavuma) ಹೊಸ ಇತಿಹಾಸ ರಚಿಸಿದ್ದಾರೆ. ಅದು ಕೂಡ ಸೋಲಿಲ್ಲದ ಸರದಾರನಾಗಿ ಎಂಬುದು ವಿಶೇಷ. ಅಂದರೆ ಬವುಮಾ ಟೆಸ್ಟ್ ತಂಡದ ನಾಯಕತ್ವವಹಿಸಿದ ಬಳಿಕ ಸೌತ್ ಆಫ್ರಿಕಾ ತಂಡ ಒಂದೇ ಒಂದು ಸೋಲು ಕಂಡಿಲ್ಲ. ಇದುವೇ ಹೊಸ ವಿಶ್ವ ದಾಖಲೆ.

ಟೆಸ್ಟ್ ಕ್ರಿಕೆಟ್ನಲ್ಲಿ ನಾಯಕನಾಗಿ ಮೊದಲ 10 ಪಂದ್ಯಗಳಲ್ಲಿ ಅತ್ಯಧಿಕ ಗೆಲುವು ಕಂಡ ನಾಯಕನೆಂಬ ವಿಶ್ವ ದಾಖಲೆ ಪೆರ್ಸಿ ಚಾಪ್ಮ್ಯಾನ್ ಹೆಸರಿನಲ್ಲಿತ್ತು. 1926 ರಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಿದ್ದ ಚಾಪ್ಮ್ಯಾನ್ ಮೊದಲ 10 ಪಂದ್ಯಗಳಲ್ಲಿ 9 ಗೆಲುವು ತಂದುಕೊಟ್ಟಿದ್ದರು. ಇದೇ ವೇಳೆ ಒಂದು ಪಂದ್ಯದಲ್ಲಿ ಮಾತ್ರ ಇಂಗ್ಲೆಂಡ್ ತಂಡ ಸೋಲನುಭವಿಸಿತ್ತು.

ಇದೀಗ ಪೆರ್ಸಿ ಚಾಪ್ಮ್ಯಾನ್ ಹೆಸರಿನಲ್ಲಿದ್ದ ಈ ವಿಶ್ವ ದಾಖಲೆಯನ್ನು ಟೆಂಬಾ ಬವುಮಾ ಮುರಿದಿದ್ದಾರೆ. ಅದು ಕೂಡ 99 ವರ್ಷಗಳ ಬಳಿಕ ಎಂಬುದು ವಿಶೇಷ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2025ರ ಸರಣಿಯಲ್ಲಿ ಸೌತ್ ಆಫ್ರಿಕಾ ತಂಡವನ್ನು 10 ಪಂದ್ಯಗಳಲ್ಲಿ ಮುನ್ನಡೆಸಿರುವ ಬವುಮಾ ಒಟ್ಟು 9 ಗೆಲುವು ಕಂಡಿದ್ದಾರೆ. ಇನ್ನು ಒಂದು ಪಂದ್ಯದಲ್ಲಿ ಸೌತ್ ಆಫ್ರಿಕಾ ಡ್ರಾ ಸಾಧಿಸಿದೆ.

ಅಂದರೆ ಟೆಂಬಾ ಬವುಮಾ ಮುನ್ನಡೆಸಿರುವ 10 ಟೆಸ್ಟ್ ಪಂದ್ಯಗಳಲ್ಲಿ ಸೌತ್ ಆಫ್ರಿಕಾ ತಂಡವು ಒಂದೇ ಒಂದು ಸೋಲು ಕಂಡಿಲ್ಲ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಹತ್ತು ಪಂದ್ಯಗಳಲ್ಲಿ ಸೋಲು ಕಾಣದ ಮೊದಲ ನಾಯಕನೆಂಬ ವಿಶ್ವ ದಾಖಲೆಯನ್ನು ಟೆಂಬಾ ಬವುಮಾ ತಮ್ಮದಾಗಿಸಿಕೊಂಡಿದ್ದಾರೆ.

ಹಾಗೆಯೇ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸರಣಿಯಲ್ಲಿ ಸೋಲು ಕಾಣದೇ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟ ವಿಶ್ವದ ಮೊದಲ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೂ ಟೆಂಬಾ ಬವುಮಾ ಪಾತ್ರರಾಗಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಯಾರಿಂದಲೂ ಸಾಧ್ಯವಾಗದಂತಹ ದಾಖಲೆಗಳನ್ನು ನಿರ್ಮಿಸುವ ಮೂಲಕ ಬವುಮಾ ಕ್ರಿಕೆಟ್ ಅಂಗಳದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More



