
ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯ ನಾಟಿಂಗ್ ಹ್ಯಾಮ್ನಲ್ಲಿ ನಡೆಯಿತು. ಆಂಗ್ಲ ತಂಡ ಈ ಟೆಸ್ಟ್‌ನಲ್ಲಿ 241 ರನ್‌ಗಳಿಂದ ಜಯಗಳಿಸುವ ಮೂಲಕ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಇನ್ನಿಂಗ್ಸ್ ಮತ್ತು 114 ರನ್‌ಗಳ ಜಯ ಸಾಧಿಸಿತ್ತು.

ಇದೀಗ ಸತತ ಎರಡು ಟೆಸ್ಟ್ ಪಂದ್ಯಗಳನ್ನು ಗೆದ್ದಿರುವ ಇಂಗ್ಲೆಂಡ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ಸ್ ಪಟ್ಟಿಯಲ್ಲಿ ಭಾರಿ ಮುನ್ನಡೆ ಸಾಧಿಸಿದೆ. ತಂಡವು ಬರೋಬ್ಬರಿ ಮೂರು ಸ್ಥಾನಗಳನ್ನು ಮೇಲೇರಿ ನೇರವಾಗಿ ಆರನೇ ಸ್ಥಾನಕ್ಕೆ ಬಂದು ಕುಳಿತಿದೆ. ಮೂರನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಬೆನ್ ಸ್ಟೋಕ್ಸ್ ಪಡೆ ಅಂಕಪಟ್ಟಿಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳುವ ಅವಕಾಶವನ್ನು ಹೊಂದಿದೆ.

ಇಂಗ್ಲೆಂಡ್ ತಂಡ ಒಂಬತ್ತನೇ ಸ್ಥಾನದಿಂದ ನೇರವಾಗಿ ಆರನೇ ಸ್ಥಾನಕ್ಕೆ ಏರಿದೆ. ಈ ಜಿಗಿತದಿಂದಾಗಿ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ ತಂಡಗಳು ಕುಸಿತ ಕಂಡಿವೆ. ಅದೇ ಸಮಯದಲ್ಲಿ, ವೆಸ್ಟ್ ಇಂಡೀಸ್ ತಂಡವು ಪಾಯಿಂಟ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ಜಾರಿದೆ.

2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆವೃತ್ತಿಯಲ್ಲಿ ಇಂಗ್ಲೆಂಡ್ ಇದುವರೆಗೆ 12 ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಐದು ಪಂದ್ಯಗಳನ್ನು ಗೆದ್ದಿದ್ದು, ಆರರಲ್ಲಿ ತಂಡ ಸೋತಿದೆ. ಒಂದು ಟೆಸ್ಟ್ ಡ್ರಾ ಆಗಿದೆ. ಇಂಗ್ಲೆಂಡ್ 45 ಅಂಕಗಳನ್ನು ಹೊಂದಿದ್ದು, ಗೆಲುವಿನ ಶೇಕಡಾವಾರು 31.25 ಆಗಿದೆ.

ಇತ್ತ ವೆಸ್ಟ್ ಇಂಡೀಸ್ ಇದುವರೆಗೆ ಆರು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಕೇವಲ ಒಂದು ಪಂದ್ಯವನ್ನು ಗೆದ್ದಿದೆ. ನಾಲ್ಕು ಟೆಸ್ಟ್‌ಗಳಲ್ಲಿ ಸೋಲು ಕಂಡಿದೆ. ಒಂದು ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಪ್ರಸ್ತುತ ವೆಸ್ಟ್ ಇಂಡೀಸ್ 16 ಅಂಕಗಳನ್ನು ಹೊಂದಿದ್ದು, ಅದರ ಗೆಲುವಿನ ಶೇಕಡಾವಾರು 22.22 ಆಗಿದೆ.

ಉಳಿದಂತೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಪಾಯಿಂಟ್ಸ್ ಟೇಬಲ್ನಲ್ಲಿ ಪ್ರಸ್ತುತ ಟೀಂ ಇಂಡಿಯಾ ಅಗ್ರಸ್ಥಾನದಲ್ಲಿದೆ. 68.51 ರಷ್ಟು ಗೆಲುವಿನ ಶೇಕಡಾವಾರು ಹೊಂದಿರುವ ಟೀಂ ಇಂಡಿಯಾ ನಂಬರ್ ಒನ್ ಸ್ಥಾನದಲ್ಲಿ ಮುಂದುವರೆದಿದೆ.

ಭಾರತದ ನಂತರ ಪಾಯಿಂಟ್ಸ್ ಟೇಬಲ್ನಲ್ಲಿ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದ್ದು, ಆಸೀಸ್ ಪಡೆಯ ಗೆಲುವಿನ ಶೇಕಡಾವಾರು ಪ್ರಸ್ತುತ 62.50 ಆಗಿದೆ. ಅಂದರೆ ಮೊದಲ ಮತ್ತು ಎರಡನೇ ತಂಡದ ನಡುವಿನ ಅಂತರ ಹೆಚ್ಚಿಲ್ಲ.

ನ್ಯೂಜಿಲೆಂಡ್ ಕ್ರಿಕೆಟ್ ತಂಡ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ತಂಡದ ಗೆಲುವಿನ ಶೇಕಡಾವಾರು ಪ್ರಸ್ತುತ 50 ಆಗಿದೆ. ಶ್ರೀಲಂಕಾ ಕೂಡ 50 ರಷ್ಟು ಗೆಲುವಿನ ಶೇಕಡಾವಾರು ಹೊಂದಿದೆ. ಆದರೆ ನ್ಯೂಜಿಲೆಂಡ್ 90 ಅಂಕ ಹಾಗೂ ಶ್ರೀಲಂಕಾ 24 ಅಂಕ ಹೊಂದಿರುವುದರಿಂದ ನ್ಯೂಜಿಲೆಂಡ್ ಪಾಯಿಂಟ್ ಪಟ್ಟಿಯಲ್ಲಿ ಮುಂದಿದೆ.