
WTC Final 2023: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ದಿನಗಳು ಮಾತ್ರ ಉಳಿದಿರುವಾಗ ಟೀಮ್ ಇಂಡಿಯಾಗೆ ಗಾಯದ ಸಮಸ್ಯೆ ಎದುರಾಗಿದೆ. ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಅಭ್ಯಾಸದ ವೇಳೆ ಗಾಯಗೊಂಡಿದ್ದಾರೆ.

ಹೌದು, ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ನೆಟ್ಸ್ನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಗಾಯಗೊಂಡಿದ್ದಾರೆ. ಭಾರತದ ನೆಟ್ ಬೌಲರ್ ಅನಿಕೇತ್ ಚೌಧುರಿ ಅವರ ರೈಸಿಂಗ್ ಎಸೆತದಿಂದ ಕಿಶನ್ ಅವರ ಕೈಗೆ ಪೆಟ್ಟಾಗಿದೆ.

ತಕ್ಷಣವೇ ಅಭ್ಯಾಸ ನಿಲ್ಲಿಸಿದ ಇಶಾನ್ ಕಿಶನ್, ಆ ಬಳಿಕ ಕೈಗೆ ಬ್ಯಾಂಡೇಜ್ನೊಂದಿಗೆ ಕಾಣಿಸಿಕೊಂಡಿದ್ದಾರೆ. ಆದರೆ ಅವರ ಗಾಯದ ಗಂಭೀರತೆ ಬಗ್ಗೆ ಇನ್ನೂ ಕೂಡ ಯಾವುದೇ ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ.

ಒಂದು ವೇಳೆ ಗಾಯ ಗಂಭೀರವಾಗಿದ್ದರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಿಂದ ಹೊರಗುಳಿಯಬಹುದು. ಇದರ ಹೊರತಾಗಿ ತಂಡದಲ್ಲಿ ಮಹತ್ವದ ಬದಲಾವಣೆ ಕಂಡು ಬರುವ ಸಾಧ್ಯತೆಯಿಲ್ಲ.

ಏಕೆಂದರೆ ಟೀಮ್ ಇಂಡಿಯಾದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕೆಎಸ್ ಭರತ್ ಸ್ಥಾನ ಪಡೆದಿದ್ದು, ಇಶಾನ್ ಕಿಶನ್ ಅಲಭ್ಯರಾದರೆ ಭರತ್ಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಖಚಿತ ಎಂದೇ ಹೇಳಬಹುದು.

ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಭಾರತ ತಂಡ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕಟ್, ಇಶಾನ್ ಕಿಶನ್ (ವಿಕೆಟ್ ಕೀಪರ್).

ಭಾರತ-ಆಸ್ಟ್ರೇಲಿಯಾ ನಡುವಣ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯವು ಜೂನ್ 7 ರಿಂದ ಶುರುವಾಗಲಿದೆ. ಇಂಗ್ಲೆಂಡ್ನ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ತಂಡ ಐಸಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಲಿದೆ.