- Kannada News Photo gallery Cricket photos WTC Final 2023 team india‘s journey to World Test Championship final
WTC Final 2023: 5 ನಾಯಕರು, ಇಬ್ಬರು ಕೋಚ್, 10 ಗೆಲುವು; ಹೀಗಿತ್ತು ಭಾರತದ ಫೈನಲ್ ಜರ್ನಿ
WTC Final 2023: ರೋಹಿತ್ ಶರ್ಮಾ ನೇತೃತ್ವದ ಭಾರತ ಮತ್ತು ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ಈ ಬಾರಿಯ ವಿಶ್ವ ಟೆಸ್ಟ್ ಫೈನಲ್‌ನಲ್ಲಿ ಜೂನ್ 7 ರಂದು ಓವಲ್‌ನಲ್ಲಿ ಮುಖಾಮುಖಿಯಾಗಲಿವೆ.
Updated on:Jun 05, 2023 | 4:15 PM

ರೋಹಿತ್ ಶರ್ಮಾ ನೇತೃತ್ವದ ಭಾರತ ಮತ್ತು ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಜೂನ್ 7 ರಂದು ಓವಲ್‌ನಲ್ಲಿ ಮುಖಾಮುಖಿಯಾಗಲಿವೆ. ಟೀಂ ಇಂಡಿಯಾ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ತಲುಪಿದ್ದರೆ, ಆಸೀಸ್ ಮೊದಲ ಬಾರಿಗೆ ಫೈನಲ್ಗೆ ಕಾಲಿಟ್ಟಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಹಾದಿಯಲ್ಲಿ ಭಾರತ ಕಳೆದ 2 ವರ್ಷಗಳಲ್ಲಿ ಒಟ್ಟು 6 ಸರಣಿಗಳನ್ನು ಆಡಿದೆ. ಈ ಪೈಕಿ ಟೀಂ ಇಂಡಿಯಾ ದೇಶಿಯ ನೆಲದಲ್ಲಿ 3 ಸರಣಿ ಹಾಗೂ ವಿದೇಶಿ ನೆಲದಲ್ಲಿ 3 ಸರಣಿಗಳನ್ನು ಆಡಿದೆ. ಇದರಲ್ಲಿ ಟೀಂ ಇಂಡಿಯಾ ತವರಿನಲ್ಲಿ ಆಡಿದ ಎಲ್ಲಾ ಮೂರು ಸರಣಿಗಳನ್ನು ಗೆದ್ದುಕೊಂಡಿತು.

ಇನ್ನು ವಿದೇಶಿ ನೆಲದಲ್ಲಿ ಆಡಿದ ಸರಣಿಗಳ ವಿಚಾರಕ್ಕೆ ಬಂದರೆ, ಟೀಂ ಇಂಡಿಯಾ ವಿದೇಶಿ ನೆಲದಲ್ಲಿ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗಳನ್ನು ಆಡಿದೆ. ಇದರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತ ಸೋತಿತ್ತು. ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್‌ಗಳ ಸರಣಿಯಲ್ಲಿ ಒಮ್ಮೆ 2-1 ಅಂತರದಿಂದ ಮುನ್ನಡೆ ಸಾಧಿಸಿದ್ದ ಭಾರತಕ್ಕೆ ಕೊನೆಯ ಹಂತದಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ. ಹೀಗಾಗಿ ಸರಣಿ ಡ್ರಾದಲ್ಲಿ ಕೊನೆಗೊಂಡಿತು. ನಂತರ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯನ್ನು ಭಾರತ 2-0 ಅಂತರದಿಂದ ಗೆದ್ದುಕೊಂಡಿತು.

ಕಳೆದ 2 ವರ್ಷಗಳಲ್ಲಿ ಭಾರತದ ಕೋಚಿಂಗ್ ಸಿಬ್ಬಂದಿ ಕೂಡ ಬದಲಾಗಿದ್ದಾರೆ. ರವಿಶಾಸ್ತ್ರಿ ಬದಲಿಗೆ ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಅದೇ ಸಮಯದಲ್ಲಿ, ಭರತ್ ಅರುಣ್ ಬದಲಿಗೆ ಪರಶ್ ಮಾಂಬ್ರೆ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಎರಡನೇ ಸೀಸನ್ನಲ್ಲಿ ಟೀಂ ಇಂಡಿಯಾದ ನಾಯಕತ್ವ ಕೂಡ ಹಲವಾರು ಬಾರಿ ಬದಲಾಗಿದೆ. ಕಳೆದ 2 ವರ್ಷಗಳಲ್ಲಿ ಭಾರತ ತಂಡ ಒಟ್ಟು 5 ನಾಯಕರ ಅಡಿಯಲ್ಲಿ ಆಡಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವ ತ್ಯಜಿಸಿದ್ದರು. ಅವರ ಸ್ಥಾನಕ್ಕೆ ರೋಹಿತ್ ಶರ್ಮಾ ಅವರನ್ನು ನಾಯಕರನ್ನಾಗಿ ಮಾಡಲಾಗಿದೆ. ಆದರೆ ಗಾಯದ ಕಾರಣ ಅವರು ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿರಲಿಲ್ಲ. ಅವರ ಅನುಪಸ್ಥಿತಿಯಲ್ಲಿ, ಕೆಎಲ್ ರಾಹುಲ್ ದಕ್ಷಿಣ ಆಫ್ರಿಕಾದಲ್ಲಿ ಭಾರತ ತಂಡವನ್ನು ಮುನ್ನಡೆಸಿದರು.

2ನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಒಟ್ಟು 18 ಟೆಸ್ಟ್ ಪಂದ್ಯಗಳನ್ನು ಆಡಿದೆ. ಈ ಪೈಕಿ ರೋಹಿತ್ ಶರ್ಮಾ 6 ಪಂದ್ಯಗಳಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದಾರೆ. ವಿರಾಟ್ ಕೊಹ್ಲಿ 7 ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದರೆ, ಕೆಎಲ್ ರಾಹುಲ್ 3 ರಲ್ಲಿ ಮತ್ತು ಅಜಿಂಕ್ಯ ರಹಾನೆ 1 ಪಂದ್ಯದಲ್ಲಿ ಮತ್ತು ಜಸ್ಪ್ರೀತ್ ಬುಮ್ರಾ 1 ಟೆಸ್ಟ್ ಪಂದ್ಯದಲ್ಲಿ ಭಾರತವನ್ನು ಮುನ್ನಡೆಸಿದರು.
Published On - 4:14 pm, Mon, 5 June 23



















