- Kannada News Photo gallery Cricket photos wtc final 2023 rohit sharma on shubman gill controversial catch
Shubman Gill Controversial catch: ಐಪಿಎಲ್ ಉದಾಹರಣೆ ನೀಡಿ ಐಸಿಸಿ ವಿರುದ್ಧ ಗರಂ ಆದ ರೋಹಿತ್ ಶರ್ಮಾ!
Shubman Gill Controversial catch: ಮೊದಲನೇಯದಾಗಿ ಡಬ್ಲ್ಯುಟಿಸಿ ಫೈನಲ್ ಆಯೋಜನೆ, ಆತಿಥ್ಯದ ಬಗ್ಗೆ ಅಸಮಾಧಾನ ಹೊರಹಾಕಿರುವ ರೋಹಿತ್ ಆ ಬಳಿಕ ಈ ಪಂದ್ಯದಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಶುಭ್ಮನ್ ಗಿಲ್ ಅವರ ವಿವಾದಾತ್ಮಕ ಕ್ಯಾಚ್ ಕುರಿತು ಐಸಿಸಿ ವಿರುದ್ಧ ಗರಂ ಆಗಿದ್ದಾರೆ.
Updated on: Jun 12, 2023 | 8:19 AM

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಮತ್ತೊಮ್ಮೆ ಮುಗ್ಗರಿಸಿದ ಭಾರತ ಕಾಲಿ ಕೈಯಲ್ಲಿ ತವರಿಗೆ ವಾಪಸ್ಸಾಗುತ್ತಿದೆ. ಟೆಸ್ಟ್ ಆರಂಭವಾದ ಮೊದಲ ದಿನದಿಂದಲೂ ಆಸೀಸ್ ವಿರುದ್ಧ ಹಿನ್ನಡೆ ಅನುಭವಿಸಿದ್ದ ಭಾರತದ ಸೋಲಿಗೆ ಇದೀಗ ನಾಯಕ ರೋಹಿತ್ ಶರ್ಮಾ ಐಸಿಸಿಯನ್ನು ನೇರ ಹೊಣೆ ಮಾಡುತ್ತಿದ್ದಾರೆ.

ಮೊದಲನೇಯದಾಗಿ ಡಬ್ಲ್ಯುಟಿಸಿ ಫೈನಲ್ ಆಯೋಜನೆ, ಆತಿಥ್ಯದ ಬಗ್ಗೆ ಅಸಮಾಧಾನ ಹೊರಹಾಕಿರುವ ರೋಹಿತ್ ಆ ಬಳಿಕ ಈ ಪಂದ್ಯದಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಶುಭ್ಮನ್ ಗಿಲ್ ಅವರ ವಿವಾದಾತ್ಮಕ ಕ್ಯಾಚ್ ಕುರಿತು ಐಸಿಸಿ ವಿರುದ್ಧ ಗರಂ ಆಗಿದ್ದಾರೆ.

ಆಸ್ಟ್ರೇಲಿಯಾ ನೀಡಿದ 444 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಭಾರತಕ್ಕೆ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಬಿರುಸಿನ ಆರಂಭ ನೀಡಿದರು. ಇವರಿಬ್ಬರ ನಡುವೆ ಉತ್ತಮ ಜೊತೆಯಾಟವಿದ್ದಂತೆ ತೋರುತ್ತಿತ್ತು. ಆದರೆ ನಂತರ ಗಿಲ್ ಅಂಪೈರ್ ಅವರ ವಿವಾದಾತ್ಮಕ ತೀರ್ಪಿಗೆ ಬಲಿಯಾದರು. ಇದು ಟೀಂ ಇಂಡಿಯಾ ಫ್ಯಾನ್ಸ್ ಹಾಗೂ ನಾಯಕ ರೋಹಿತ್ ಅವರ ಕಣ್ಣನ್ನು ಕೆಂಪಗಾಗಿಸಿದೆ.

ಸ್ಕಾಟ್ ಬೋಲ್ಯಾಂಡ್ ಎಸೆತದಲ್ಲಿ ಗಿಲ್ ಬ್ಯಾಟ್ ಸವರಿ ಚೆಂಡು ಸ್ಲಿಪ್ನತ್ತ ಸಾಗಿತು. ತಕ್ಷಣವೇ ಅತ್ಯುತ್ತಮ ಡೈವಿಂಗ್ ಮೂಲಕ ಕ್ಯಾಮರೋನ್ ಗ್ರೀನ್ ಎಡಗೈಯಲ್ಲಿ ಕ್ಯಾಚ್ ಹಿಡಿದರು. ಇದಾಗ್ಯೂ ಫೀಲ್ಡ್ ಅಂಪೈರ್ ಕ್ಯಾಚ್ ಅನ್ನು ಪರಿಶೀಲಿಸುವಂತೆ ಮೂರನೇ ಅಂಪೈರ್ಗೆ ಮನವಿ ಮಾಡಿದರು. ಹಲವು ಬಾರಿ ರೀಪ್ಲೆ ಮಾಡಿದ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಆದರೆ ರೀಪ್ಲೆ ವೇಳೆಯಲ್ಲೇ ಚೆಂಡು ಮೈದಾನಕ್ಕೆ ತಾಗಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಇದಾಗ್ಯೂ ಮೂರನೇ ಅಂಪೈರ್ ಔಟ್ ಎಂದಿರುವುದು ಅಚ್ಚರಿಗೆ ಕಾರಣವಾಯಿತು.

ಥರ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡುತ್ತಿದ್ದಂತೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೈದಾನದಲ್ಲೇ ಆಕ್ರೋಶ ಹೊರಹಾಕಿದ್ದರು. ಟಿವಿಯಲ್ಲಿ ಪುನಃ ಪರಿಶೀಲಿಸಿದ ಬಳಿಕ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಈ ಬಗ್ಗೆ ನಾಯಕ ರೋಹಿತ್ ಅಸಮಾಧಾನ ಹೊರಹಾಕಿದ್ದಾರೆ.

ಪಂದ್ಯ ಸೋತ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ, ತುಂಬಾ ನಿರಾಸೆಯಾಗಿದೆ. ಮೂರನೇ ಅಂಪೈರ್ ಹೆಚ್ಚು ರಿವ್ಯೂವ್ಗಳನ್ನು ನೋಡಬೇಕಾಗಿತ್ತು. ಆದರೆ ಮೂರನೇ ಅಂಪೈರ್ ನಿರ್ಧಾರವನ್ನು ಬಹಳ ಬೇಗನೆ ತೆಗೆದುಕೊಂಡರು.

ಅಲ್ಲದೆ ಇಂತಹ ಫೈನಲ್ ಪಂದ್ಯಗಳಲ್ಲಿ ಕ್ಯಾಮೆರಾ ಆ್ಯಂಗಲ್‌ಗಳು ಹೆಚ್ಚು ಇರಬೇಕು. ಐಪಿಎಲ್‌ನಲ್ಲಿ 10 ಕ್ಕೂ ಹೆಚ್ಚು ಕ್ಯಾಮೆರಾ ಆ್ಯಂಗಲ್‌ಗಳಿರುತ್ತವೆ. ಆದರೆ ಐಸಿಸಿ ಈವೆಂಟ್‌ಗಳಲ್ಲಿ ಅಷ್ಟು ವ್ಯವಸ್ಥೆ ಮಾಡಲಾಗಿಲ್ಲ ಎಂದು ಐಸಿಸಿ ವಿರುದ್ಧ ರೋಹಿತ್ ಅಸಮಾಧಾನ ಹೊರಹಾಕಿದ್ದಾರೆ.




