WTC Final 2023: ಲಂಡನ್ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯವು ಇದೀಗ ಎಲ್ಲರ ಕುತೂಹಲದ ಕೇಂದ್ರವಾಗಿದೆ. ಏಕೆಂದರೆ ಅಂತಿಮ ದಿನದಾಟದಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು 280 ರನ್ಗಳ ಅವಶ್ಯಕತೆಯಿದ್ದರೆ, ಆಸ್ಟ್ರೇಲಿಯಾಗೆ 7 ವಿಕೆಟ್ಗಳ ಅಗತ್ಯತೆಯಿದೆ. ಹೀಗಾಗಿ ಕೊನೆಯ ದಿನದಾಟದಲ್ಲಿ ಯಾರು ಮೇಲುಗೈ ಸಾಧಿಸಲಿದ್ದಾರೆ ಎಂಬುದೇ ಕುತೂಹಲ.
ಒಂದು ವೇಳೆ ಅಂತಿಮ ದಿನದಾಟದ ಅಂತ್ಯಕ್ಕೆ ಭಾರತ ತಂಡವು 279 ರನ್ಗಳಿಸಿದರೆ ಪಂದ್ಯವು ಟೈ ಆಗಲಿದೆ. ಅಂದರೆ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ ಅನ್ನು 443 ರನ್ಗಳಿಗೆ ಅಂತ್ಯಗೊಳಿಸಿದರೆ ಯಾರು ಚಾಂಪಿಯನ್ ಆಗಲಿದೆ ಎಂಬುದೇ ಪ್ರಶ್ನೆ.
ಹೀಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯವು ಟೈಯಾದರೆ ಫಲಿತಾಂಶವನ್ನು ನಿರ್ಧರಿಸಲು ನಿಯಮವನ್ನು ರೂಪಿಸಲಾಗಿದೆ. ಈ ನಿಯಮದಂತೆ ಉಭಯ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.
ಐಸಿಸಿ ನಿಯಮದ ಪ್ರಕಾರ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯವು ಡ್ರಾ ಆದರೆ ಅಥವಾ ಟೈನಲ್ಲಿ ಅಂತ್ಯಗೊಂಡರೆ ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಿ ಟ್ರೋಫಿಯನ್ನು ಹಂಚಲಾಗುತ್ತದೆ.
ಇದರ ಹೊರತಾಗಿ ಮೀಸಲು ದಿನದಾಟದಲ್ಲಿ ಪಂದ್ಯವನ್ನು ಆಯೋಜಿಸಲಾಗುವುದಿಲ್ಲ. ಇಲ್ಲಿ 5ನೇ ದಿನದಾಟಕ್ಕೆ ಮಳೆ ಅಡ್ಡಿಪಡಿಸಿದರೆ ಅಥವಾ ಇನ್ನಿತರೆ ಕಾರಣಗಳಿಂದ ಪಂದ್ಯ ನಡೆಯದಿದ್ದರೆ ಮಾತ್ರ ಸೋಮವಾರವನ್ನು ಮೀಸಲು ದಿನವನ್ನಾಗಿ ಬಳಸಲಾಗುತ್ತದೆ ಎಂದು ತಿಳಿಸಲಾಗಿದೆ. ಹೀಗಾಗಿ ಪಂದ್ಯವು ಡ್ರಾ ಆದರೆ ಅಥವಾ ಟೈಯಾದರೆ ಉಭಯ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸಲಾಗುತ್ತದೆ.
ಸದ್ಯ 5ನೇ ದಿನದಾಟವನ್ನು ಆರಂಭಿಸಿರುವ ಟೀಮ್ ಇಂಡಿಯಾ 51 ಓವರ್ ಮುಕ್ತಾಯದ ವೇಳೆ 5 ವಿಕೆಟ್ ನಷ್ಟಕ್ಕೆ ಒಟ್ಟು 190 ರನ್ ಕಲೆಹಾಕಿದೆ. ಇನ್ನುಳಿದಂತೆ 254 ರನ್ಗಳಿಸಿದರೆ ಭಾರತ ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಬಹುದು.