
ಹರಾರೆಯಲ್ಲಿ ನಡೆದ ಝಿಂಬಾಬ್ವೆ ವಿರುದ್ಧದ 4ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಜಯಭೇರಿ ಬಾರಿಸಿದೆ. ಈ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಭಾರತ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ವಿಶೇಷ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಜೈಸ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಓವರ್ನಿಂದಲೇ ಬಿರುಸಿನ ಬ್ಯಾಟಿಂಗ್ನೊಂದಿಗೆ ಅಬ್ಬರಿಲಾರಂಭಿಸಿದ ಯುವ ದಾಂಡಿಗ 29 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಪೂರೈಸಿದರು. ಅದು ಕೂಡ ಮೊದಲ 7 ಓವರ್ಗಳ ಒಳಗೆ ಎಂಬುದು ವಿಶೇಷ. ಇದರೊಂದಿಗೆ ವಿಶೇಷ ದಾಖಲೆಯೊಂದು ಯಶಸ್ವಿ ಪಾಲಾಯಿತು.

ಅಂದರೆ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ ಮೊದಲ 7 ಓವರ್ಗಳಲ್ಲಿ ಅತೀ ಹೆಚ್ಚು ಬಾರಿ 50+ ಸ್ಕೋರ್ಗಳಿಸಿದ ವಿಶೇಷ ದಾಖಲೆಯೊಂದು ರೋಹಿತ್ ಶರ್ಮಾ ಹೆಸರಿನಲ್ಲಿತ್ತು. ಹಿಟ್ಮ್ಯಾನ್ 2 ಬಾರಿ 7 ಓವರ್ಗಳ ಒಳಗೆ ಅರ್ಧಶತಕ ಪೂರೈಸಿ ಈ ದಾಖಲೆ ನಿರ್ಮಿಸಿದ್ದರು.

ಇದೀಗ ಈ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿ ಜೈಸ್ವಾಲ್ ಯಶಸ್ವಿಯಾಗಿದ್ದಾರೆ. ಝಿಂಬಾಬ್ವೆ ವಿರುದ್ಧ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸುವುದರೊಂದಿಗೆ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ ಮೊದಲ 7 ಓವರ್ಗಳ ಒಳಗೆ ಅತ್ಯಧಿಕ ಬಾರಿ 50+ ಸ್ಕೋರ್ ಗಳಿಸಿದ ವಿಶೇಷ ದಾಖಲೆಯೊಂದು ಜೈಸ್ವಾಲ್ ಪಾಲಾಗಿದೆ.

ಯಶಸ್ವಿ ಜೈಸ್ವಾಲ್ ಈವರೆಗೆ ಮೂರು ಬಾರಿ 7 ಓವರ್ಗಳ ಒಳಗೆ ಅರ್ಧಶತಕಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಈ ಮೂಲಕ ರೋಹಿತ್ ಶರ್ಮಾ ಹೆಸರಿನಲ್ಲಿದ್ದ ವಿಶೇಷ ದಾಖಲೆಯೊಂದನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯುವ ಎಡಗೈ ದಾಂಡಿಗ ಯಶಸ್ವಿಯಾಗಿದ್ದಾರೆ.

ಇದಲ್ಲದೆ ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಪರ ಮೂರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಜೈಸ್ವಾಲ್ ಪಾತ್ರರಾಗಿದ್ದಾರೆ. 22 ವರ್ಷದ ಯಶಸ್ವಿ ಜೈಸ್ವಾಲ್ ಈವರೆಗೆ 3 ಪಂದ್ಯಶ್ರೇಷ್ಠ ಪ್ರಶಸ್ತಿಗಳನ್ನು ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ 53 ಎಸೆತಗಳನ್ನು ಎದುರಿಸಿದ ಯಶಸ್ವಿ ಜೈಸ್ವಾಲ್ 2 ಭರ್ಜರಿ ಸಿಕ್ಸ್ ಹಾಗೂ 13 ಫೋರ್ಗಳೊಂದಿಗೆ ಅಜೇಯ 93 ರನ್ ಬಾರಿಸಿದರು. ಅಲ್ಲದೆ ಶುಭ್ಮನ್ ಗಿಲ್ (58) ಜೊತೆಗೂಡಿ ಭಾರತ ತಂಡವನ್ನು 15.2 ಓವರ್ಗಳಲ್ಲಿ 156 ರನ್ಗಳ ಗುರಿ ತಲುಪಿಸುವ ಮೂಲಕ ಟೀಮ್ ಇಂಡಿಯಾಗೆ 10 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟರು.