Yashasvi Jaiswal: ಸಿಕ್ಸ್ ಸಿಡಿಸಿಯೇ ವಿಶ್ವ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
TV9 Web | Updated By: ಝಾಹಿರ್ ಯೂಸುಫ್
Updated on:
Feb 18, 2024 | 1:57 PM
Yashasvi Jaiswal Records: ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಟೀಮ್ ಇಂಡಿಯಾದ ಯುವ ದಾಂಡಿಗ ಯಶಸ್ವಿ ಜೈಸ್ವಾಲ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ದಾಖಲೆಗಳ ಪಟ್ಟಿಯಲ್ಲಿ ಸಿಕ್ಸ್ಗಳ ವಿಶ್ವ ದಾಖಲೆ ಕೂಡ ಇರುವುದು ವಿಶೇಷ. ಸಿಕ್ಸ್ ಸಿಡಿಸಿ ಯಶಸ್ವಿ ನಿರ್ಮಿಸಿದ ದಾಖಲೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
1 / 8
ರಾಜ್ಕೋಟ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದ ಮೂಲಕ ಯಶಸ್ವಿ ಜೈಸ್ವಾಲ್ (Yashasvi Jaiswal) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಜೈಸ್ವಾಲ್ ಅಜೇಯ ದ್ವಿಶತಕ ಬಾರಿಸಿದ್ದಾರೆ. ಈ ದ್ವಿಶತಕದೊಂದಿಗೆ ಅವರ ಬ್ಯಾಟ್ನಿಂದ ಮೂಡಿಬಂದ ಸಿಕ್ಸರ್ಗಳ ಸಂಖ್ಯೆ ಬರೋಬ್ಬರಿ 12.
2 / 8
ಇದರೊಂದಿಗೆ ಟೆಸ್ಟ್ ಕ್ರಿಕೆಟ್ನ ಇನಿಂಗ್ಸ್ವೊಂದರಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ವಿಶ್ವ ದಾಖಲೆ ಯಶಸ್ವಿ ಜೈಸ್ವಾಲ್ ಪಾಲಾಗಿದೆ. ಅಲ್ಲದೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಇನಿಂಗ್ಸ್ ಒಂದರಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.
3 / 8
ಟೆಸ್ಟ್ ಕ್ರಿಕೆಟ್ನ ಇನಿಂಗ್ಸ್ವೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ದಾಖಲೆ ಪಾಕಿಸ್ತಾನ್ ತಂಡದ ಮಾಜಿ ನಾಯಕ ವಾಸಿಂ ಅಕ್ರಮ್ ಹೆಸರಿನಲ್ಲಿತ್ತು. 1996 ರಲ್ಲಿ ಝಿಂಬಾಬ್ವೆ ವಿರುದ್ಧ ವಾಸಿಂ ಅಕ್ರಮ್ 12 ಸಿಕ್ಸ್ಗಳೊಂದಿಗೆ 257 ರನ್ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.
4 / 8
ಇದೀಗ ಇಂಗ್ಲೆಂಡ್ ವಿರುದ್ಧ ಸಿಕ್ಸ್ಗಳ ಸುರಿಮಳೆಗೈದಿರುವ ಯಶಸ್ವಿ ಜೈಸ್ವಾಲ್ ಅಕ್ರಮ್ ಅವರ ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಅತೀ ಕಿರಿಯ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು 22 ವರ್ಷದ ಜೈಸ್ವಾಲ್ ತಮ್ಮದಾಗಿಸಿಕೊಂಡಿದ್ದಾರೆ.
5 / 8
ಹಾಗೆಯೇ ಟೆಸ್ಟ್ ಕ್ರಿಕೆಟ್ನ ಇನಿಂಗ್ಸ್ವೊಂದರಲ್ಲಿ ಟೀಮ್ ಇಂಡಿಯಾ ಪರ ಅತೀ ಹೆಚ್ಚು ಸಿಕ್ಸ್ ಸಿಡಿಸಿದ ದಾಖಲೆ ಕೂಡ ಇದೀಗ ಜೈಸ್ವಾಲ್ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ನವಜೋತ್ ಸಿಂಗ್ ಸಿಧು ಹಾಗೂ ಮಯಾಂಕ್ ಅಗರ್ವಾಲ್ ಹೆಸರಿನಲ್ಲಿತ್ತು.
6 / 8
1994 ರಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನವಜೋತ್ ಸಿಂಗ್ ಸಿಧು 8 ಸಿಕ್ಸ್ಗಳನ್ನು ಬಾರಿಸಿದ್ದರು. ಇದಾದ ಬಳಿಕ 2019 ರಲ್ಲಿ ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ 8 ಸಿಕ್ಸ್ ಸಿಡಿಸಿ ಈ ದಾಖಲೆಯನ್ನು ಸರಿಗಟ್ಟಿದ್ದರು.
7 / 8
ಇದೀಗ ಬರೋಬ್ಬರಿ 12 ಸಿಕ್ಸ್ಗಳೊಂದಿಗೆ ಯಶಸ್ವಿ ಜೈಸ್ವಾಲ್ ಹಳೆಯ ದಾಖಲೆಗಳನ್ನು ಉಡೀಸ್ ಮಾಡಿದ್ದಾರೆ. ಅಷ್ಟೇ ಅಲ್ಲದೆ 147 ವರ್ಷಗಳ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಇತಿಹಾಸವನ್ನೇ ನಿರ್ಮಸಿದ್ದಾರೆ.
8 / 8
ಇನ್ನು ಈ ಪಂದ್ಯದಲ್ಲಿ 236 ಎಸೆತಗಳನ್ನು ಎದುರಿಸಿದ ಯಶಸ್ವಿ ಜೈಸ್ವಾಳ್ 12 ಸಿಕ್ಸ್ ಹಾಗೂ 14 ಫೋರ್ಗಳೊಂದಿಗೆ ಅಜೇಯ 214 ರನ್ ಬಾರಿಸಿದರು. ಈ ದ್ವಿಶತಕದ ನೆರವಿನಿಂದ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ನಲ್ಲಿ 4 ವಿಕೆಟ್ ಕಳೆದುಕೊಂಡು 430 ರನ್ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ. ಈ ಮೂಲಕ ಇಂಗ್ಲೆಂಡ್ ತಂಡಕ್ಕೆ ದ್ವಿತೀಯ ಇನಿಂಗ್ಸ್ನಲ್ಲಿ 557 ರನ್ಗಳ ಕಠಿಣ ಗುರಿ ನೀಡಿದೆ.