ರಾಜ್ಕೋಟ್ನಲ್ಲಿ ಇಂಗ್ಲೆಂಡ್ ತಂಡವನ್ನು 434 ರನ್‌ಗಳಿಂದ ಮಣಿಸಿದ ಟೀಂ ಇಂಡಿಯಾ ಈ ಗೆಲುವಿನೊಂದಿಗೆ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಅಲ್ಲದೆ ಆಂಗ್ಲರನ್ನು ಕೇವಲ 122 ರನ್‌ಗಳಿಗೆ ಕಟ್ಟಿಹಾಕಿ ಬೃಹತ್ ಅಂತರದಿಂದ ಜಯಿಸಿದ ಭಾರತ ಐತಿಹಾಸಿಕ ದಾಖಲೆಯೊಂದನ್ನು ನಿರ್ಮಿಸಿದೆ.
ಮೂರನೇ ಟೆಸ್ಟ್ ಗೆಲುವಿಗೆ 557 ರನ್‌ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ ಕೇವಲ 122 ರನ್ ಗಳಿಗೆ ಆಲೌಟ್ ಆಯಿತು. ಈ ಮೂಲಕ ಭಾರತ ಪಂದ್ಯವನ್ನು 434 ರನ್‌ಗಳಿಂದ ಗೆದ್ದುಕೊಂಡಿತು. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ರನ್‌ಗಳ ವಿಷಯದಲ್ಲಿ ಭಾರತದ ಅತಿದೊಡ್ಡ ಗೆಲುವಾಗಿದೆ. ಐತಿಹಾಸಿಕ ಗೆಲುವು ದಾಖಲಿಸುವ ಮೂಲಕ ಭಾರತ ತಂಡ ವೆಸ್ಟ್ ಇಂಡೀಸ್‌ನ ಪ್ರಮುಖ ದಾಖಲೆಯನ್ನು ಮುರಿದಿದೆ.
ಇಂಗ್ಲೆಂಡ್ ವಿರುದ್ಧ 434 ರನ್‌ಗಳ ಗೆಲುವು ಟೀಂ ಇಂಡಿಯಾಗೆ ರನ್‌ಗಳ ದೃಷ್ಟಿಯಿಂದ ಅತಿದೊಡ್ಡ ಟೆಸ್ಟ್ ಗೆಲುವಾಗಿದೆ. ಇದಕ್ಕೂ ಮುನ್ನ 2021 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ 372 ರನ್‌ಗಳಿಂದ ಗೆದ್ದಿತ್ತು. ಇದು ಭಾರತದ ಅತಿದೊಡ್ಡ ವಿಜಯದ ದಾಖಲೆಯಾಗಿತ್ತು.
ಒಟ್ಟಾರೆಯಾಗಿ ನೋಡಿದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ದೊಡ್ಡ ಗೆಲುವನ್ನು ದಾಖಲಿಸಿದ ತಂಡಗಳ ಪಟ್ಟಿಯಲ್ಲಿ ಇದೀಗ ಭಾರತ ತಂಡ ಎಂಟನೇ ಸ್ಥಾನಕ್ಕೆ ತಲುಪಿದೆ. ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ತಂಡ ಟೆಸ್ಟ್‌ನಲ್ಲಿ ಅತಿ ದೊಡ್ಡ ಗೆಲುವನ್ನು ದಾಖಲಿಸಿ ಎಂಟನೇ ಸ್ಥಾನದಲ್ಲಿತ್ತು.
1976ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 425 ರನ್‌ಗಳಿಂದ ಗೆದ್ದಿತ್ತು. ಆದರೆ ಇದೀಗ ಟೀಂ ಇಂಡಿಯಾ ಇಂಗ್ಲೆಂಡ್ ತಂಡವನ್ನು 434 ರನ್‌ಗಳಿಂದ ಮಣಿಸುವ ಮೂಲಕ ವೆಸ್ಟ್ ಇಂಡೀಸ್‌ನ 48 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ದೊಡ್ಡ ಗೆಲುವನ್ನು ದಾಖಲಿಸಿದ ತಂಡಗಳ ಪಟ್ಟಿಯಲ್ಲಿ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದೆ. 1928ರಲ್ಲಿ ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ 675 ರನ್‌ಗಳಿಂದ ಗೆಲುವು ಸಾಧಿಸಿತ್ತು. ಅಂದಿನಿಂದ ಇಂದಿನವರೆಗೆ ಯಾವುದೇ ತಂಡಗಳಿಗೂ ಈ ದಾಖಲೆ ಮುರಿಯಲು ಸಾಧ್ಯವಾಗಿಲ್ಲ.
ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಭಾರತ ತಂಡದ ಪರ ಅಮೋಘ ಶತಕ ಬಾರಿಸಿದ್ದರು. ಮೊದಲು ಬ್ಯಾಟ್ ಮಾಡಿದ ಭಾರತ ತಂಡ 445 ರನ್ ಗಳಿಸಿತ್ತು. ಇದಾದ ಬಳಿಕ ಬೌಲರ್‌ಗಳು ದಿಟ್ಟ ಪ್ರದರ್ಶನ ನೀಡಿ ಇಂಗ್ಲೆಂಡ್ ತಂಡವನ್ನು 319 ರನ್‌ಗಳಿಗೆ ಆಲೌಟ್ ಮಾಡಿದರು.
ಈ ಮೂಲಕ ಟೀಂ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 126 ರನ್‌ಗಳ ಮುನ್ನಡೆ ಸಾಧಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಪರ ಜೈಸ್ವಾಲ್ ಮತ್ತು ಶುಭವವಮನ್ ಗಿಲ್ ಉತ್ತಮ ಪ್ರದರ್ಶನ ನೀಡಿದರು. ಈ ಆಟಗಾರರಿಂದಾಗಿಯೇ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 430 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿ ಇಂಗ್ಲೆಂಡ್ಗೆ 557 ರನ್‌ಗಳ ಟಾರ್ಗೆಟ್ ನೀಡಿತ್ತು.
Published On - 5:59 pm, Sun, 18 February 24