ರಾಜ್ಕೋಟ್ನ ನಿರಂಜನ್ ಶಾ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ (Yashasvi Jaiswal) ಸ್ಪೋಟಕ ದ್ವಿಶತಕ ಸಿಡಿಸಿ ಅಬ್ಬರಿಸಿದ್ದಾರೆ. ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಜೈಸ್ವಾಲ್ 3ನೇ ದಿನದಾಟದಲ್ಲಿ 122 ಎಸೆತಗಳಲ್ಲಿ ಶತಕ ಪೂರೈಸಿದ್ದರು.
ಇನ್ನು ನಾಲ್ಕನೇ ದಿನದಾಟದಲ್ಲಿ 104 ರನ್ಗಳೊಂದಿಗೆ ಇನಿಂಗ್ಸ್ ಮುಂದುವರೆಸಿದ ಯಶಸ್ವಿ ಸ್ಪೋಟಕ ಬ್ಯಾಟಿಂಗ್ಗೆ ಒತ್ತು ನೀಡಿದರು. ಪರಿಣಾಮ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳ ಸುರಿಮಳೆಯಾಯಿತು. ಅದರಲ್ಲೂ ಜೇಮ್ಸ್ ಅ್ಯಂಡರ್ಸನ್ ಅವರ ಒಂದೇ ಓವರ್ನಲ್ಲಿ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿ ಅಬ್ಬರಿಸಿದರು.
ಈ ಬಿರುಸಿನ ಬ್ಯಾಟಿಂಗ್ನೊಂದಿಗೆ ಇಂಗ್ಲೆಂಡ್ ಬೌಲರ್ಗಳ ಬೆಂಡೆತ್ತಿದ ಯಶಸ್ವಿ ಜೈಸ್ವಾಲ್ ಕೇವಲ 231 ಎಸೆತಗಳಲ್ಲಿ 10 ಭರ್ಜರಿ ಸಿಕ್ಸ್ ಹಾಗೂ 14 ಫೋರ್ಗಳೊಂದಿಗೆ ಭರ್ಜರಿ ದ್ವಿಶತಕ ಪೂರೈಸಿದರು. ಈ ಮೂಲಕ ಇಂಗ್ಲೆಂಡ್ ವಿರುದ್ಧ ಬ್ಯಾಕ್ ಟು ಬ್ಯಾಕ್ ಡಬಲ್ ಸೆಂಚುರಿ ಸಿಡಿಸಿದ ವಿಶೇಷ ಸಾಧನೆ ಮಾಡಿದರು.
ಇದಕ್ಕೂ ಮುನ್ನ ವಿಶಾಖಪಟ್ಟಣಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಯಶಸ್ವಿ ಜೈಸ್ವಾಲ್ 209 ರನ್ ಬಾರಿಸಿದ್ದರು. ಇದೀಗ ಮತ್ತೊಮ್ಮೆ ದ್ವಿಶತಕ ಬಾರಿಸುವ ಮೂಲಕ ಯುವ ದಾಂಡಿಗ ಅಬ್ಬರಿಸಿರುವುದು ವಿಶೇಷ.
ಈ ಪಂದ್ಯದಲ್ಲಿ 236 ಎಸೆತಗಳನ್ನು ಎದುರಿಸಿದ ಯಶಸ್ವಿ ಜೈಸ್ವಾಲ್ 12 ಭರ್ಜರಿ ಸಿಕ್ಸ್ ಹಾಗೂ 14 ಫೋರ್ಗಳೊಂದಿಗೆ ಅಜೇಯ 214 ರನ್ ಬಾರಿಸಿದರು. ಮತ್ತೊಂದೆಡೆ ಜೈಸ್ವಾಲ್ಗೆ ಉತ್ತಮ ಸಾಥ್ ನೀಡಿದ ಸರ್ಫರಾಝ್ ಖಾನ್ (68) ಅರ್ಧಶತಕ ಸಿಡಿಸಿದರು. ಈ ಮೂಲಕ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ನಲ್ಲಿ 4 ವಿಕೆಟ್ ನಷ್ಟಕ್ಕೆ 430 ರನ್ಗಳಿಸಿ ಡಿಕ್ಲೇರ್ ಘೋಷಿಸಿದೆ. ಅತ್ತ ಇಂಗ್ಲೆಂಡ್ ತಂಡವು ಈ ಪಂಧ್ಯವನ್ನು ಗೆಲ್ಲಬೇಕಿದ್ದರೆ ದ್ವಿತೀಯ ಇನಿಂಗ್ಸ್ನಲ್ಲಿ 557 ರನ್ ಕಲೆಹಾಕಬೇಕು.
Published On - 1:10 pm, Sun, 18 February 24