Ashwin: ಟೀಮ್ ಇಂಡಿಯಾಗೆ ಗುಡ್ ನ್ಯೂಸ್: ತಂಡಕ್ಕೆ ಮರಳಿದ ಅಶ್ವಿನ್
Ravichandran Ashwin: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ 3ನೇ ದಿನದಾಟಕ್ಕೆ ರವಿಚಂದ್ರನ್ ಅಶ್ವಿನ್ ಅಲಭ್ಯರಾಗಿದ್ದರು. ಅವರ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾ 10+1 ಆಟಗಾರರೊಂದಿಗೆ ಕಣಕ್ಕಿಳಿದಿತ್ತು. ಅಂದರೆ ಅಶ್ವಿನ್ ಬದಲಿಗೆ ಕಣಕ್ಕಿಳಿದ ದೇವದತ್ ಪಡಿಕ್ಕಲ್ಗೆ ಬ್ಯಾಟಿಂಗ್ ಅಥವಾ ಬೌಲಿಂಗ್ ಮಾಡುವ ಅವಕಾಶ ಇರಲಿಲ್ಲಿ.
Updated on: Feb 18, 2024 | 10:57 AM

ರಾಜ್ಕೋಟ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದ 2ನೇ ದಿನದಂದು ಅಲಭ್ಯರಾಗಿದ್ದ ರವಿಚಂದ್ರನ್ ಅಶ್ವಿನ್ (Ravichandran Ashwin) ಇದೀಗ ತಂಡಕ್ಕೆ ಮರಳಿದ್ದಾರೆ. ಬಲ್ಲಮೂಲಗಳ ಮಾಹಿತಿ ಪ್ರಕಾರ, ಇಂದು ಬೆಳಿಗ್ಗೆ ಅಶ್ವಿನ್ ಚೆನ್ನೈನಿಂದ ರಾಜ್ಕೋಟ್ಗೆ ತೆರಳಿದ್ದಾರೆ. ಅಲ್ಲದೆ ಮಧ್ಯಾಹ್ನದ ವೇಳೆಗೆ ಟೀಮ್ ಇಂಡಿಯಾವನ್ನು ಕೂಡಿಕೊಳ್ಳಲಿದ್ದಾರೆ.

ನಿರಂಜನ್ ಶಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದ 2ನೇ ದಿನದಾಟದ ಮುಕ್ತಾಯದ ಬೆನ್ನಲ್ಲೇ ರವಿಚಂದ್ರನ್ ಅಶ್ವಿನ್ ಚೆನ್ನೈಗೆ ತೆರಳಿದ್ದರು. ತಾಯಿಯ ಅನಾರೋಗ್ಯದ ನಿಮಿತ್ತ ಅವರು ತಂಡದಿಂದ ಹೊರಗುಳಿದಿದ್ದರು.

ಹೀಗಾಗಿ ಮೂರನೇ ದಿನದಾಟದಲ್ಲಿ ಅಶ್ವಿನ್ ಅವರ ಬದಲಿಗೆ ದೇವದತ್ ಪಡಿಕ್ಕಲ್ ಕಣಕ್ಕಿಳಿದಿದ್ದರು. ಇದೀಗ ನಾಲ್ಕನೇ ದಿನದಾಟದ ವೇಳೆ ರವಿ ಅಶ್ವಿನ್ ತಂಡವನ್ನು ಕೂಡಿಕೊಳ್ಳಲಿದ್ದು, ಹೀಗಾಗಿ ಭಾರತ ತಂಡದ 2ನೇ ಇನಿಂಗ್ಸ್ ಬೌಲಿಂಗ್ ವೇಳೆ ಅವರು ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅಶ್ವಿನ್ ಅವರ ವಾಪಾಸಾತಿಯು ಭಾರತ ತಂಡದ ಬೌಲಿಂಗ್ ಬಲವನ್ನು ಹೆಚ್ಚಿಸಲಿದೆ. ಏಕೆಂದರೆ ಅಶ್ವಿನ್ ಅವರ ಅನುಪಸ್ಥಿತಿಯಲ್ಲಿ ಭಾರತ ತಂಡವು ನಾಲ್ವರು ಬೌಲರ್ಗಳನ್ನು ಮಾತ್ರ ಬಳಸಿಕೊಂಡಿತ್ತು. ಇದೀಗ ಅವರ ರಿಎಂಟ್ರಿಯಿಂದಾಗಿ ದ್ವಿತೀಯ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಐವರು ಬೌಲರ್ಗಳನ್ನು ಬಳಸಿಕೊಳ್ಳಬಹುದಾಗಿದೆ.

ಇನ್ನು ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಅಶ್ವಿನ್ ಝಾಕ್ ಕ್ರಾಲಿ ಅವರ ವಿಕೆಟ್ ಪಡೆದಿದ್ದರು. ಈ ವಿಕೆಟ್ನೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ಗಳ ದಾಖಲೆ ಬರೆದಿದ್ದರು. ಅಲ್ಲದೆ ಈ ಸಾಧನೆ 2ನೇ ಭಾರತೀಯ ಹಾಗೂ ವಿಶ್ವದ 9ನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಅಷ್ಟೇ ಅಲ್ಲದೆ ಅತೀ ಕಡಿಮೆ ಟೆಸ್ಟ್ ಪಂದ್ಯಗಳ ಮೂಲಕ 500 ವಿಕೆಟ್ಗಳನ್ನು ಕಬಳಿಸಿದ ವಿಶ್ವದ 2ನೇ ಬೌಲರ್ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದರು. ಈ ದಾಖಲೆ ಪಟ್ಟಿಯಲ್ಲಿ 87 ಪಂದ್ಯಗಳಿಂದ ಈ ಸಾಧನೆ ಮಾಡಿದ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅಗ್ರಸ್ಥಾನದಲ್ಲಿದ್ದರೆ, 98 ಟೆಸ್ಟ್ ಪಂದ್ಯಗಳ ಮೂಲಕ ಐನೂರು ವಿಕೆಟ್ ಪೂರೈಸಿರುವ ಅಶ್ವಿನ್ ದ್ವಿತೀಯ ಸ್ಥಾನದಲ್ಲಿದ್ದಾರೆ.
