Jasprit Bumrah: ರೂಟ್ ಕ್ಲಿಯರ್ ಮಾಡಿ ದಾಖಲೆ ಬರೆದ ಬುಮ್ರಾ
India vs England 3rd Test: ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಜಸ್ಪ್ರೀತ್ ಬುಮ್ರಾ ಕೇವಲ 1 ವಿಕೆಟ್ ಮಾತ್ರ ಪಡೆದಿದ್ದರು. ಈ ಒಂದು ವಿಕೆಟ್ನೊಂದಿಗೆ ಬುಮ್ರಾ ವಿಶೇಷ ದಾಖಲೆ ಬರೆದಿದ್ದಾರೆ. ಅದು ಕೂಡ ಜೋ ರೂಟ್ ರನ್ನು ಔಟ್ ಮಾಡುವ ಮೂಲಕ ಎಂಬುದು ವಿಶೇಷ.
Updated on: Feb 18, 2024 | 9:55 AM

ರಾಜ್ಕೋಟ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ವಿಶೇಷ ದಾಖಲೆ ಬರೆದಿದ್ದಾರೆ. ಅದು ಕೂಡ ಇಂಗ್ಲೆಂಡ್ ತಂಡದ ಟೆಸ್ಟ್ ಸ್ಪೆಷಲಿಸ್ಟ್ ಜೋ ರೂಟ್ ಅವರನ್ನು ಔಟ್ ಮಾಡುವ ಮೂಲಕ ಎಂಬುದು ವಿಶೇಷ.

ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಜೋ ರೂಟ್ (18) ಅವರನ್ನು ಜಸ್ಪ್ರೀತ್ ಬುಮ್ರಾ ಔಟ್ ಮಾಡಿದ್ದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ ರೂಟ್ಗೆ ಅತೀ ಹೆಚ್ಚು ಬಾರಿ ರೂಟ್ ತೋರಿಸಿದ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಜೋ ರೂಟ್ರನ್ನು ಟೆಸ್ಟ್ನಲ್ಲಿ ಅತ್ಯಧಿಕ ಬಾರಿ ಔಟ್ ಮಾಡಿದ ಮೂರನೇ ಬೌಲರ್ ಎಂಬ ದಾಖಲೆ ಬರೆದಿದ್ದಾರೆ.

ಇದರ ಜೊತೆಗೆ ಇಂಟರ್ನ್ಯಾಷನಲ್ ಕ್ರಿಕೆಟ್ನಲ್ಲಿ ಜೋ ರೂಟ್ರನ್ನು ಅತೀ ಹೆಚ್ಚು ಬಾರಿ ಔಟ್ ಮಾಡಿದ 2ನೇ ಬೌಲರ್ ಎಂಬ ದಾಖಲೆಯನ್ನು ಜಸ್ಪ್ರೀತ್ ಬುಮ್ರಾ ತಮ್ಮದಾಗಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಪ್ಯಾಟ್ ಕಮಿನ್ಸ್ ಮೊದಲ ಸ್ಥಾನದಲ್ಲಿದ್ದಾರೆ.

39 ಇನಿಂಗ್ಸ್ಗಳಲ್ಲಿ ಜೋ ರೂಟ್ಗೆ ಬೌಲಿಂಗ್ ಮಾಡಿರುವ ಆಸ್ಟ್ರೇಲಿಯಾ ಆಟಗಾರ ಕಮಿನ್ಸ್ ಒಟ್ಟು 14 ಬಾರಿ ಔಟ್ ಮಾಡಿದ್ದಾರೆ. ಇದೀಗ 29 ಇನಿಂಗ್ಸ್ಗಳಲ್ಲಿ ಜೋ ರೂಟ್ರನ್ನು ಜಸ್ಪ್ರೀತ್ ಬುಮ್ರಾ 13 ಬಾರಿ ಪೆವಿಲಿಯನ್ಗೆ ಕಳುಹಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್ ಬ್ಯಾಟರ್ ವಿರುದ್ಧದ ಅತ್ಯಂತ ಯಶಸ್ವಿ ಬೌಲರ್ಗಳಲ್ಲಿ ಬುಮ್ರಾ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.

ಒಂದು ವೇಳೆ ಮುಂದಿನ ಇನಿಂಗ್ಸ್ ಹಾಗೂ ಇನ್ನುಳಿದ 2 ಪಂದ್ಯಗಳಲ್ಲಿ ಜೋ ರೂಟ್ ಅವರನ್ನು ಜಸ್ಪ್ರೀತ್ ಬುಮ್ರಾ ಎರಡು ಬಾರಿ ಔಟ್ ಮಾಡಿದರೆ ಪ್ಯಾಟ್ ಕಮಿನ್ಸ್ ಅವರನ್ನು ಹಿಂದಿಕ್ಕಿ ಈ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 445 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಪ್ರಥಮ ಇನಿಂಗ್ಸ್ ಆಡಿದ ಇಂಗ್ಲೆಂಡ್ 319 ರನ್ಗಳಿಗೆ ಆಲೌಟ್ ಆಗಿದೆ. ಇದೀಗ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ ಆಡುತ್ತಿದ್ದು, 56 ಓವರ್ಗಳ ಮುಕ್ತಾಯದ ವೇಳೆ 2 ವಿಕೆಟ್ ಕಳೆದುಕೊಂಡು 213 ರನ್ ಕಲೆಹಾಕಿದೆ.
