ಪರ್ತ್ ಟೆಸ್ಟ್‌ನಲ್ಲಿ ಭರ್ಜರಿ ಶತಕ ಬಾರಿಸುವ ಮೂಲಕ ಟೀಂ ಇಂಡಿಯಾಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದ ಯಶಸ್ವಿ ಜೈಸ್ವಾಲ್, ಅಡಿಲೇಡ್‌ನಲ್ಲಿ ನಡೆಯುತ್ತಿರುವ ಡೇ-ನೈಟ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಮೊದಲ ಎಸೆತದಲ್ಲಿಯೇ ಗೋಲ್ಡನ್ ಡಕ್ ಆದರು. ಇದರೊಂದಿಗೆ ಜೈಸ್ವಾಲ್ ಅನೇಕ ಅನಗತ್ಯ ದಾಖಲೆಗಳನ್ನು ತಮ್ಮ ಖಾತೆಗೆ ಹಾಕಿಕೊಂಡರು.
ಅಡಿಲೇಡ್‌ನಲ್ಲಿ ನಡೆದ ಡೇ-ನೈಟ್ ಟೆಸ್ಟ್‌ನಲ್ಲಿ ಮೊದಲ ಎಸೆತದಲ್ಲಿ ಔಟಾದ ಯಶಸ್ವಿ ಜೈಸ್ವಾಲ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಗೋಲ್ಡನ್ ಡಕ್ಗೆ ವಿಕೆಟ್ ಒಪ್ಪಿಸಿದರು. ಯಶಸ್ವಿ ಒಟ್ಟು ಮೂರು ಬಾರಿ ಶೂನ್ಯಕ್ಕೆ ಔಟಾಗಿದ್ದಾರಾದರೂ ಗೋಲ್ಡನ್ ಡಕ್ ಆಗಿರುವುದು ಇದೇ ಮೊದಲು.
ಯಶಸ್ವಿ ಜೈಸ್ವಾಲ್ ಅವರು ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಮೊದಲ ಎಸೆತದಲ್ಲಿ ಔಟಾದ ವಿಶ್ವದ ಮೂರನೇ ಆರಂಭಿಕ ಆಟಗಾರ ಮತ್ತು ಭಾರತದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಅವರಿಗಿಂತ ಮೊದಲು, 2017 ರಲ್ಲಿ ಹ್ಯಾಮಿಲ್ಟನ್ ಮಸಕಡ್ಜಾ ಮತ್ತು 2021 ರಲ್ಲಿ ಜಾಕ್ ಕ್ರಾಲಿ ಹಗಲು-ರಾತ್ರಿ ಟೆಸ್ಟ್‌ನಲ್ಲಿ ಮೊದಲ ಎಸೆತದಲ್ಲಿ ಔಟಾಗಿದ್ದರು.
ಯಶಸ್ವಿ ಜೈಸ್ವಾಲ್ ಡೇ-ನೈಟ್ ಟೆಸ್ಟ್‌ನಲ್ಲಿ ಗೋಲ್ಡನ್ ಡಕ್ ಔಟಾದ ಎರಡನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಅವರಿಗಿಂತ ಮೊದಲು, ಆರ್ ಅಶ್ವಿನ್ 2020 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಡೇ-ನೈಟ್ ಟೆಸ್ಟ್‌ನಲ್ಲಿ ಮೊದಲ ಎಸೆತದಲ್ಲೇ ಔಟಾಗಿದ್ದರು.
ಇಲ್ಲಿಯವರೆಗೆ, ಚೇತೇಶ್ವರ ಪೂಜಾರ, ಪೃಥ್ವಿ ಶಾ, ಅಜಿಂಕ್ಯ ರಹಾನೆ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಅಶ್ವಿನ್, ಉಮೇಶ್ ಯಾದವ್ ಸೇರಿದಂತೆ 8 ಭಾರತೀಯ ಆಟಗಾರರು ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ. ಇದೀಗ ಈ ಪಟ್ಟಿಗೆ ಯಶಸ್ವಿ ಜೈಸ್ವಾಲ್ ಕೂಡ ಸೇರಿಕೊಂಡಿದ್ದಾರೆ.
ಯಶಸ್ವಿ ಜೈಸ್ವಾಲ್ ಅಡಿಲೇಡ್ ಟೆಸ್ಟ್‌ನಲ್ಲಿ ಪುನರಾಗಮನ ಮಾಡುವ ನಿರೀಕ್ಷೆಯಿದೆ. ಏಕೆಂದರೆ ಪರ್ತ್ ಟೆಸ್ಟ್‌ನಲ್ಲೂ ಜೈಸ್ವಾಲ್ ಮೊದಲ ಇನ್ನಿಂಗ್ಸ್‌ನಲ್ಲಿ ರನ್‌ಗೆ ಔಟಾಗಿದ್ದರು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಲಯ ಕಂಡುಕೊಂಡಿದ್ದ ಜೈಸ್ವಾಲ್ 161 ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದ್ದರು. ಅವರ ಈ ಇನ್ನಿಂಗ್ಸ್ನಿಂದ ಟೀಂ ಇಂಡಿಯಾ ಮೊದಲ ಟೆಸ್ಟ್‌ನಲ್ಲಿ 295 ರನ್‌ಗಳ ಬೃಹತ್ ಅಂತರದಿಂದ ಜಯಗಳಿಸಿತ್ತು.