Updated on: Apr 30, 2023 | 10:30 PM
IPL 2023: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 1000ನೇ ಪಂದ್ಯದಲ್ಲಿ ಸ್ಪೋಟಕ ಶತಕ ಸಿಡಿಸುವ ಮೂಲಕ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಹಲವು ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ಆಯ್ದುಕೊಂಡಿತು.
ಅದರಂತೆ ಮುಂಬೈ ಇಂಡಿಯನ್ಸ್ ವಿರುದ್ಧ ಇನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಮುಂಬೈ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ಜೈಸ್ವಾಲ್ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಪರಿಣಾಮ ಕೇವಲ 53 ಎಸೆತಗಳಲ್ಲಿ ಶತಕ ಮೂಡಿಬಂತು.
ಅಷ್ಟೇ ಅಲ್ಲದೆ 62 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 16 ಫೋರ್ನೊಂದಿಗೆ 124 ರನ್ಗಳಿಸಿ ಔಟಾದರು. ಈ ಭರ್ಜರಿ ಶತಕದೊಂದಿಗೆ ಯಶಸ್ವಿ ಜೈಸ್ವಾಲ್ ಐಪಿಎಲ್ನಲ್ಲಿ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ...
ರಾಜಸ್ಥಾನ್ ರಾಯಲ್ಸ್ ಪರ ಗರಿಷ್ಠ ವೈಯುಕ್ತಿಕ ಸ್ಕೋರ್ಗಳಿಸಿದ ದಾಖಲೆ ಇದೀಗ ಯಶಸ್ವಿ ಜೈಸ್ವಾಲ್ ಪಾಲಾಗಿದೆ. ಈ ಹಿಂದೆ ಜೋಸ್ ಬಟ್ಲರ್ 64 ಎಸೆತಗಳಲ್ಲಿ 124 ರನ್ ಬಾರಿಸಿದ್ದರು. ಇದೀಗ ಕೇವಲ 62 ಎಸೆತಗಳಲ್ಲಿ 124 ರನ್ ಬಾರಿಸಿ ಜೈಸ್ವಾಲ್ ಅಗ್ರಸ್ಥಾನಕ್ಕೇರಿದ್ದಾರೆ.
ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಸ್ಕೋರ್ಗಳಿಸಿದ ಅನ್ಕ್ಯಾಪ್ಡ್ ಆಟಗಾರ ಎಂಬ ದಾಖಲೆ ಕೂಡ ಯಶಸ್ವಿ ಜೈಸ್ವಾಲ್ ಪಾಲಾಗಿದೆ. 2011 ರಲ್ಲಿ ಪಂಜಾಬ್ ಕಿಂಗ್ಸ್ ಪರ ಕಣಕ್ಕಿಳಿದಿದ್ದ ಪೌಲ್ ವಾಲ್ತಟಿ ಸಿಎಸ್ಕೆ ವಿರುದ್ಧ 120 ರನ್ ಬಾರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಇದೀಗ 124 ರನ್ ಬಾರಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧ ಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಕೂಡ ಜೈಸ್ವಾಲ್ ತಮ್ಮದಾಗಿಸಿಕೊಂಡಿದ್ದಾರೆ. 21 ವರ್ಷದ ಯಶಸ್ವಿ ಜೈಸ್ವಾಲ್ 124 ರನ್ ಬಾರಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.
ರಾಜಸ್ಥಾನ್ ರಾಯಲ್ಸ್ ತಂಡದ ಪರ ಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಜೈಸ್ವಾಲ್ ಪಾತ್ರರಾಗಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿರುವ ಜೈಸ್ವಾಲ್ ಅವರ ಪ್ರಸ್ತುತ ವಯಸ್ಸು 21 ವರ್ಷ, 123 ದಿನಗಳು.
ಇನ್ನು ಈ ಬಾರಿಯ ಐಪಿಎಲ್ನಲ್ಲಿ ಗರಿಷ್ಠ ಸ್ಕೋರ್ಗಳಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ಕೂಡ ಯಶಸ್ವಿ ಜೈಸ್ವಾಲ್ ಪಾಲಾಗಿದೆ. ಇದಕ್ಕೂ ಮುನ್ನ 104 ರನ್ ಬಾರಿಸಿದ್ದ ವೆಂಕಟೇಶ್ ಅಯ್ಯರ್ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. ಇದೀಗ 124 ರನ್ ಬಾರಿಸುವ ಮೂಲಕ ಜೈಸ್ವಾಲ್ ಮೊದಲ ಸ್ಥಾನಕ್ಕೇರಿದ್ದಾರೆ.