
ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಬಾರಿಸಿ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಅಬ್ಬರಿಸಿದ್ದಾರೆ. ವಿಶಾಖಪಟ್ಟಣಂನಲ್ಲಿನ ವೈಎಸ್ ರಾಜಶೇಖರ ರೆಡ್ಡಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ 290 ಎಸೆತಗಳನ್ನು ಎದುರಿಸಿದ ಜೈಸ್ವಾಲ್ 7 ಭರ್ಜರಿ ಸಿಕ್ಸ್ ಮತ್ತು 19 ಫೋರ್ಗಳೊಂದಿಗೆ 209 ರನ್ ಬಾರಿಸಿದ್ದಾರೆ.

ಈ 209 ರನ್ಗಳೊಂದಿಗೆ ಯಶಸ್ವಿ ಜೈಸ್ವಾಲ್ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅದು ಕೂಡ ತಮ್ಮ 22ನೇ ವಯಸ್ಸಿನಲ್ಲಿ ಎಂಬುದು ವಿಶೇಷ. ಈ ದಾಖಲೆಗಳಾವುವು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ...

ಈ ದ್ವಿಶತಕದೊಂದಿಗೆ ಟೀಮ್ ಇಂಡಿಯಾ ಪರ ಡಬಲ್ ಸೆಂಚುರಿ ಬಾರಿಸಿದ ಮೂರನೇ ಕಿರಿಯ ಬ್ಯಾಟರ್ ಎಂಬ ಹಿರಿಮೆಗೆ ಯಶಸ್ವಿ ಜೈಸ್ವಾಲ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ವಿನೋದ್ ಕಾಂಬ್ಳಿ (21 ವರ್ಷ, 35 ದಿನಗಳು), ಸುನಿಲ್ ಗವಾಸ್ಕರ್ (21 ವರ್ಷ, 283 ದಿನಗಳು) ಈ ಸಾಧನೆ ಮಾಡಿದ್ದರು. ಇದೀಗ 22 ವರ್ಷ, 37 ದಿನಗಳಲ್ಲಿ ದ್ವಿಶತಕ ಬಾರಿಸುವ ಮೂಲಕ ಜೈಸ್ವಾಲ್ ಈ ಸಾಧಕರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ಹಾಗೆಯೇ ಟೀಮ್ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ನಾಲ್ಕನೇ ಎಡಗೈ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಸೌರವ್ ಗಂಗೂಲಿ (239), ವಿನೋದ್ ಕಾಂಬ್ಳಿ (227), ಗೌತಮ್ ಗಂಭೀರ್ (206) ಈ ಸಾಧನೆ ಮಾಡಿದ್ದರು. ಇದೀಗ 209 ರನ್ ಬಾರಿಸುವ ಮೂಲಕ ಎಡಗೈ ದಾಂಡಿಗರ ವಿಶೇಷ ದಾಖಲೆ ಪಟ್ಟಿಯಲ್ಲೂ ಯಶಸ್ವಿ ಜೈಸ್ವಾಲ್ ಸ್ಥಾನ ಪಡೆದಿದ್ದಾರೆ.

ಇದಲ್ಲದೆ ಟೀಮ್ ಇಂಡಿಯಾ ಪರ ಟೆಸ್ಟ್‌ನಲ್ಲಿ ದ್ವಿಶತಕ ಬಾರಿಸಲು ಅತ್ಯಂತ ಕಡಿಮೆ ಇನಿಂಗ್ಸ್ ತೆಗೆದುಕೊಂಡ ಬ್ಯಾಟರ್ಗಳ ಪಟ್ಟಿಯಲ್ಲಿ ಜೈಸ್ವಾಲ್ 5ನೇ ಸ್ಥಾನ ಅಲಂಕರಿಸಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಕರುಣ್ ನಾಯರ್. ತಮ್ಮ 3ನೇ ಟೆಸ್ಟ್ ಇನಿಂಗ್ಸ್ನಲ್ಲಿ ಕರುಣ್ ಈ ಸಾಧನೆ ಮಾಡಿದ್ದರು. ಇದೀಗ 10ನೇ ಇನಿಂಗ್ಸ್ ಮೂಲಕ ದ್ವಿಶತಕ ಬಾರಿಸಿ ಯಶಸ್ವಿ ಜೈಸ್ವಾಲ್ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಭಾರತ ಪರ ಇದುವರೆಗೆ ಒಟ್ಟು 25 ಆಟಗಾರರು ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ್ದಾರೆ. ಈ ಪಟ್ಟಿಯಲ್ಲಿ ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ, ಚೇತೇಶ್ವರ ಪೂಜಾರ ಸೇರಿದಂತೆ ಸ್ಟಾರ್ ಆಟಗಾರರು ಕಾಣಿಸಿಕೊಂಡಿದ್ದಾರೆ. ಇದೀಗ ಟೆಸ್ಟ್‌ನಲ್ಲಿ ದ್ವಿಶತಕ ಸಿಡಿಸಿದ ಭಾರತದ 25ನೇ ಆಟಗಾರನಾಗಿ ಯಶಸ್ವಿ ಜೈಸ್ವಾಲ್ ಹೊರಹೊಮ್ಮಿದ್ದಾರೆ.

ಇನ್ನು ಯಶಸ್ವಿ ಜೈಸ್ವಾಲ್ (209) ಅವರ ಈ ಭರ್ಜರಿ ಡಬಲ್ ಸೆಂಚುರಿ ನೆರವಿನಿಂದ ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ 396 ರನ್ಗಳಿಸಿ ಆಲೌಟ್ ಆಗಿದೆ. ಅದರಂತೆ ಇದೀಗ ಮೊದಲ ಇನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ತಂಡವು 6 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 32 ರನ್ ಕಲೆಹಾಕಿದೆ.