
ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಕ್ಕಿತು. ಆರಂಭಿಕರಾದ ಯಶಸ್ವಿ ಜೈಸ್ವಾಲ್ ಕೆಎಲ್ ರಾಹುಲ್ ಮೊದಲ ವಿಕೆಟ್‌ಗೆ 94 ರನ್ ಕಲೆಹಾಕಿದರು. ರಾಹುಲ್ ಔಟಾದ ನಂತರವೂ ಆಟ ಮುಂದುವರೆಸಿದ ಯಶಸ್ವಿ ಜೈಸ್ವಾಲ್ ಓಲ್ಡ್ ಟ್ರಾಫರ್ಡ್‌ನಲ್ಲಿ ಇತಿಹಾಸ ನಿರ್ಮಿಸಿದರು.

ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ ಯಶಸ್ವಿ ಜೈಸ್ವಾಲ್ 107 ಎಸೆತಗಳಲ್ಲಿ 10 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 58 ರನ್ ಬಾರಿಸಿದರು. ಈ ಮೂಲಕ ಕಳೆದ 50 ವರ್ಷಗಳಲ್ಲಿ ಈ ಮೈದಾನದಲ್ಲಿ ಯಾವುದೇ ಭಾರತೀಯ ಆರಂಭಿಕ ಆಟಗಾರನಿಗೆ ಮಾಡಲಾಗದ ಸಾಧನೆಯನ್ನು ಜೈಸ್ವಾಲ್ ಮಾಡಿದರು.

ಮೊದಲ ಇನ್ನಿಂಗ್ಸ್ನಲ್ಲಿ ಅರ್ಧಶತಕ ಬಾರಿಸಿರುವ ಜೈಸ್ವಾಲ್ ಕಳೆದ 51 ವರ್ಷಗಳಲ್ಲಿ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ 50 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಭಾರತೀಯ ಆರಂಭಿಕ ಆಟಗಾರ ಎನಿಸಿಕೊಂಡಿದ್ದಾರೆ. ಜೈಸ್ವಾಲ್‌ಗಿಂತ ಮೊದಲು, ಸುನಿಲ್ ಗವಾಸ್ಕರ್ ಭಾರತೀಯ ಆರಂಭಿಕ ಆಟಗಾರನಾಗಿ ಈ ಮೈದಾನದಲ್ಲಿ ಅರ್ಧಶತಕ ಗಳಿಸಿದ್ದರು.

ಟೀಂ ಇಂಡಿಯಾದ ಮಾಜಿ ನಾಯಕ ಸುನಿಲ್ ಗವಾಸ್ಕರ್ 1974 ರಲ್ಲಿ ಈ ಸಾಧನೆ ಮಾಡಿದ್ದರು. ಅಂದರೆ, ಜೈಸ್ವಾಲ್ 51 ವರ್ಷಗಳ ನಂತರ ಈ ಸಾಧನೆಯನ್ನು ಪುನರಾವರ್ತಿಸಿದ್ದಾರೆ. ಆದಾಗ್ಯೂ ಜೈಸ್ವಾಲ್ ತಮ್ಮ ಅರ್ಧಶತಕದ ಇನ್ನಿಂಗ್ಸ್ ಅನ್ನು ಶತಕವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾಗಿ ಸ್ಪಿನ್ನರ್ ಲಿಯಾಮ್ ಡಾಸನ್ಗೆ ಬಲಿಯಾದರು.

ಇದು ಮಾತ್ರವಲ್ಲದೆ ಈ ಅರ್ಧಶತಕದ ಇನ್ನಿಂಗ್ಸ್ ಮೂಲಕ ಯಶಸ್ವಿ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ನಲ್ಲಿ 1000 ರನ್‌ಗಳನ್ನು ಪೂರೈಸಿದ ಸಾಧನೆ ಮಾಡಿದ್ದಾರೆ. ಇಲ್ಲಿಯವರೆಗೆ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧ 1 ಶತಕ ಮತ್ತು 2 ದ್ವಿಶತಕಗಳನ್ನು ಬಾರಿಸಿದ್ದು, 5 ಅರ್ಧಶತಕಗಳನ್ನು ಸಹ ಸಿಡಿಸಿದ್ದಾರೆ.

ವಿಶೇಷವೆಂದರೆ ಯಶಸ್ವಿ ಜೈಸ್ವಾಲ್ ಇದುವರೆಗೆ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಕೇವಲ 2089 ರನ್‌ಗಳನ್ನು ಗಳಿಸಿದ್ದಾರೆ. ಈ ರನ್‌ಗಳಲ್ಲಿ ಅರ್ಧದಷ್ಟು ರನ್ಗಳು ಇಂಗ್ಲೆಂಡ್ ವಿರುದ್ಧ ಮಾತ್ರ ಬಂದಿವೆ. ಅಂದರೆ ಜೈಸ್ವಾಲ್ ಇತರ ತಂಡಗಳಿಗೆ ಹೊಲಿಸಿದರೆ, ಇಂಗ್ಲೆಂಡ್ ವಿರುದ್ಧ ಅದ್ಭುತ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಈ ಅಂಕಿ ಅಂಶಗಳಿಂದ ಗಮನಿಸಬಹುದು.
Published On - 8:24 pm, Wed, 23 July 25