Updated on: Feb 02, 2023 | 8:30 PM
ಅಹಮದಾಬಾದ್ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಆರಂಭಿಕ ಆಟಗಾರ ಶುಭ್ಮನ್ ಭರ್ಜರಿ ಸೆಂಚುರಿ ಸಿಡಿಸಿ ಮಿಂಚಿದ್ದರು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ್ದ ಗಿಲ್ ಕೇವಲ 54 ಎಸೆತಗಳಲ್ಲಿ ಶತಕ ಪೂರೈಸಿದ್ದರು.
ಅಷ್ಟೇ ಅಲ್ಲದೆ ಇನಿಂಗ್ಸ್ನ ಅಂತ್ಯದವರೆಗೂ ಬ್ಯಾಟ್ ಬೀಸಿದ್ದ ಯುವ ದಾಂಡಿಗ 63 ಎಸೆತಗಳಲ್ಲಿ 7 ಸಿಡಿಲಬ್ಬರದ ಸಿಕ್ಸ್ ಹಾಗೂ 12 ಫೋರ್ಗಳೊಂದಿಗೆ ಅಜೇಯ 126 ರನ್ ಚಚ್ಚಿದ್ದರು. ಇದರೊಂದಿಗೆ ಹಲವು ದಾಖಲೆಗಳು ಗಿಲ್ ಪಾಲಾಯಿತು. ಅದರಲ್ಲೂ ಟೀಮ್ ಇಂಡಿಯಾ ಪರ ಚುಟುಕು ಕ್ರಿಕೆಟ್ನಲ್ಲಿ ಶತಕ ಸಿಡಿಸಿದ ಕಿರಿಯ ಆಟಗಾರ ಎನಿಸಿಕೊಂಡರು.
ಟೀಮ್ ಇಂಡಿಯಾ ಪರ ಮೂರು ಸ್ವರೂಪಗಳಲ್ಲಿ ಶತಕ ಬಾರಿಸಿದ ಕಿರಿಯ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...
ಸಚಿನ್ ತೆಂಡೂಲ್ಕರ್: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಟೀಮ್ ಇಂಡಿಯಾ ಪರ 17ನೇ ವಯಸ್ಸಿನಲ್ಲೇ ಶತಕ ಸಿಡಿಸಿದ್ದರು. 1990 ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಸಚಿನ್ ಅಜೇಯ 119 ರನ್ ಬಾರಿಸಿದ್ದರು. ಅಂದು ಸಚಿನ್ ಅವರ ವಯಸ್ಸು 17 ವರ್ಷ 107 ದಿನಗಳು ಮಾತ್ರ. ಇದರೊಂದಿಗೆ ಭಾರತದ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಸಚಿನ್ ತೆಂಡೂಲ್ಕರ್ ಪಾಲಾಯಿತು. 22 ವರ್ಷಗಳು ಕಳೆದರೂ ಭಾರತದ ಯಾವುದೇ ಆಟಗಾರನಿಗೆ ಈ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ ಎಂಬುದೇ ವಿಶೇಷ.
ವಿನೋದ್ ಕಾಂಬ್ಳಿ: ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್ನಲ್ಲಿ ಶತಕ ಬಾರಿಸಿದ ಕಿರಿಯ ಆಟಗಾರ ಎಂಬ ದಾಖಲೆ ಎಡಗೈ ದಾಂಡಿಗ ವಿನೋದ್ ಕಾಂಬ್ಳಿ ಹೆಸರಿನಲ್ಲಿದೆ. 1993 ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ವಿನೋದ್ ಕಾಂಬ್ಳಿ ಅಜೇಯ 100 ರನ್ ಬಾರಿಸಿದ್ದರು. ಅಂದು ಕಾಂಬ್ಳಿಯ ವಯಸ್ಸು ಕೇವಲ 21 ವರ್ಷ ಮಾತ್ರ. ವಿಶೇಷ ಎಂದರೆ ವಿನೋದ್ ಕಾಂಬ್ಳಿ ತಮ್ಮ ಜನ್ಮದಿನದಂದೇ ಈಗ ದಾಖಲೆ ಬರೆದಿದ್ದರು.
ಶುಭ್ಮನ್ ಗಿಲ್: 23 ವರ್ಷದ ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್ಮನ್ ಶುಭ್ಮನ್ ಗಿಲ್ ನ್ಯೂಜಿಲೆಂಡ್ ವಿರುದ್ಧ ಕೇವಲ 54 ಎಸೆತಗಳಲ್ಲಿ ಚೊಚ್ಚಲ ಟಿ20 ಶತಕ ಸಿಡಿಸಿದ್ದಾರೆ. ಇದರೊಂದಿಗೆ ಟಿ20 ಕ್ರಿಕೆಟ್ನಲ್ಲಿ ಶತಕ ಬಾರಿಸಿದ ಭಾರತದ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಗಿಲ್ ಪಾತ್ರರಾಗಿದ್ದಾರೆ.
Published On - 8:29 pm, Thu, 2 February 23