
ಕ್ರಿಸ್ಟಿಯಾನೊ ರೊನಾಲ್ಡೊ ತಾನೆಂಥ ಆಟಗಾರ ಎಂಬುದನ್ನು ಮತ್ತೊಮ್ಮೆ ವಿಶ್ವಕ್ಕೆ ಸಾರಿದ್ದಾರೆ. ವಿಶ್ವಕಪ್ ಕ್ವಾಲಿಫೈಯಿಂಗ್ ಪಂದ್ಯದಲ್ಲಿ ಐರ್ಲೆಂಡ್ ವಿರುದ್ದ ಪೋರ್ಚುಗಲ್ ತಂಡವನ್ನು ಮುನ್ನಡೆಸಿದ್ದ ರೊನಾಲ್ಡೊ ಆರಂಭದಲ್ಲೇ ಸಿಕ್ಕ ಪೆನಾಲ್ಟಿ ಅವಕಾಶವನ್ನು ಕೈ ಚೆಲ್ಲಿದ್ದರು. ರೊನಾಲ್ಡೊ ಬಾರಿಸಿದ ಚೆಂಡನ್ನು ಗೋಲ್ ಕೀಪರ್ ಭದ್ರವಾಗಿ ಕೈಯಲ್ಲಿ ಬಂಧಿಸುತ್ತಿದ್ದಂತೆ ಇಡೀ ಸ್ಟೇಡಿಯಂನಲ್ಲಿ ನೀರವ ಮೌನ ಆವರಿಸಿತ್ತು. ಇದಾಗಿ ಹಲವು ಬಾರಿ ಪೋರ್ಚುಗಲ್ ತಂಡ ಐರ್ಲೆಂಡ್ ಗೋಲ್ ಪೋಸ್ಟ್ನತ್ತ ದಾಳಿ ನಡೆಸಿದರೂ ಫಲಿತಾಂಶ ಮಾತ್ರ ಶೂನ್ಯವಾಗಿತ್ತು. ಮತ್ತೊಂದೆಡೆ ಸಾಂಘಿಕ ಪ್ರದರ್ಶನ ನೀಡಿದ್ದ ಐರ್ಲೆಂಡ್ ತಂಡಕ್ಕೆ ಜಾನ್ ಈಗನ್ ಮುನ್ನಡೆ ತಂದುಕೊಟ್ಟರು. ಇನ್ನೇನು ಮೊದಲಾರ್ಧ ಮುಕ್ತಾಯವಾಗಲಿದೆ ಅನ್ನುವಷ್ಟರಲ್ಲಿ 45ನೇ ನಿಮಿಷದಲ್ಲಿ ಐರಿಷ್ ಡಿಫೆಂಡರ್ ಜಾನ್ ಈಗನ್ ಹೆಡ್ ಮಾಡಿ ಗೋಲು ದಾಖಲಿಸಿದರು.

ದ್ವಿತಿಯಾರ್ಧದಲ್ಲಿ ಐರ್ಲೆಂಡ್ ಆಟಗಾರರು ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು. ಇನ್ನೇನು ಪಂದ್ಯ ಮುಗಿಯಲು ನಿಮಿಷಗಳು ಮಾತ್ರ ಉಳಿದಿತ್ತು. ಐರ್ಲೆಂಡ್ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಆದರೆ ಕಣದಲ್ಲಿ ಕ್ರಿಸ್ಟಿಯಾನೊ ಸೋಲುವ ಮೂಡ್ನಲ್ಲಿರಲಿಲ್ಲ. ಪೋರ್ಚುಗಲ್ ಫುಟ್ಬಾಲ್ ಪ್ರೇಮಿಗಳು ಕಾತುರದಿಂದ ಎದುರು ನೋಡುತ್ತಿದ್ದ ಐತಿಹಾಸಿಕ ಕ್ಷಣವು 89 ನೇ ನಿಮಿಷದಲ್ಲಿ ಮೂಡಿಬಂತು.

ಎಡಭಾಗದಿಂದ ಬಂದ ಚೆಂಡನ್ನು ಭರ್ಜರಿ ಹೆಡರ್ ಮೂಲಕ ಕ್ರಿಸ್ಟಿಯಾನೊ ರೊನಾಲ್ಡೊ ಗೋಲಾಗಿ ಪರಿವರ್ತಿಸಿದರು. ಅಲ್ಲಿಗೆ ನಮ್ಮದೇ ಗೆಲುವು ಅಂದುಕೊಂಡಿದ್ದ ಐರ್ಲೆಂಡ್ಗೆ ಶಾಕ್. ಪಂದ್ಯವು 1-1 ಸಮಬಲದಲ್ಲಿತ್ತು. ಹೆಚ್ಚುವರಿ ನಿಮಿಷದಲ್ಲಿ ಪಂದ್ಯ ಮುಂದುವರೆದರೂ ಎಲ್ಲರೂ ಡ್ರಾನಲ್ಲಿ ಅಂತ್ಯವಾಗಲಿದೆ ಎಂದು ಕೊಂಡಿದ್ದರು. ಆದರೆ ಕೊನೆಯ ನಿಮಿಷದಲ್ಲಿ ಮತ್ತೊಮ್ಮೆ ಮ್ಯಾಜಿಕ್ ತೋರಿಸಿದ ಕ್ರಿಸ್ಟಿಯಾನೊ ರೊನಾಲ್ಡೊ ಗೋಲ್ಡನ್ ಹೆಡ್ ಮೂಲಕ ಪೋರ್ಚುಗಲ್ ತಂಡಕ್ಕೆ ಜಯ ತಂದುಕೊಟ್ಟರು. ಇದರೊಂದಿಗೆ ರೊನಾಲ್ಡೊ ಪೆನಾಲ್ಟಿ ಅವಕಾಶವನ್ನು ಕೈಚೆಲ್ಲಿದಾಗ ನೀರವ ಮೌನವಹಿಸಿದ್ದ ಪೋರ್ಚುಗಲ್ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.

ಈ ಎರಡು ಗೋಲುಗಳೊಂದಿಗೆ ಕ್ರಿಸ್ಟಿಯಾನೊ ರೊನಾಲ್ಡೊ ಫುಟ್ಬಾಲ್ ಅಂಗಳದಲ್ಲಿ ವಿಶ್ವ ದಾಖಲೆ ಬರೆದಿರುವುದು ವಿಶೇಷ. ಹೌದು, ಐರ್ಲೆಂಡ್ ವಿರುದ್ದ ಗಳಿಸಿದ ಎರಡು ಗೋಲ್ಗಳೊಂದಿಗೆ ರೊನಾಲ್ಡೊ ಅಂತಾರಾಷ್ಟ್ರೀಯ ಫುಟ್ಬಾಲ್ನಲ್ಲಿ ಅತೀ ಹೆಚ್ಚು ಗೋಲು ದಾಖಲಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

ಈ ಹಿಂದೆ ಇರಾನ್‌ನ ಅಲಿ ದೇಯಿ ಹೆಸರಿನಲ್ಲಿದ್ದ 109 ಗೋಲುಗಳ ದಾಖಲೆಯನ್ನು ಹಿಂದಿಕ್ಕಿ, 111 ಗೋಲು ಬಾರಿಸುವ ಮೂಲಕ ಅತಿ ಹೆಚ್ಚು ಅಂತರರಾಷ್ಟ್ರೀಯ ಗೋಲುಗಳ ವಿಶ್ವದಾಖಲೆಯನ್ನು ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮದಾಗಿಸಿಕೊಂಡಿದ್ದಾರೆ. 149 ಪಂದ್ಯಗಳಲ್ಲಿ ಅಲಿ ದೇಯಿ 109 ಗೋಲುಗಳನ್ನು ಬಾರಿಸಿದ್ದರೆ, 36 ವರ್ಷದ ಕ್ರಿಸ್ಟಿಯಾನೊ 180 ಪಂದ್ಯಗಳಲ್ಲಿ 111 ಗೋಲುಗಳ ದಾಖಲಿಸಿ ಈ ಸಾಧನೆ ಮಾಡಿದ್ದಾರೆ.

ಇನ್ನು ಪ್ರಸ್ತುತ ಫುಟ್ಬಾಲ್ ಅಂಗಳದಲ್ಲಿ ಕಣಕ್ಕಿಳಿಯುವವರಲ್ಲಿ 100 ಗೋಲು ದಾಖಲಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಕೂಡ ರೊನಾಲ್ಡೊಗೆ ಸಲ್ಲುತ್ತದೆ. ಈ ಪಟ್ಟಿಯಲ್ಲಿ ಮತ್ತೋರ್ವ ಖ್ಯಾತ ಆಟಗಾರ ಅರ್ಜೆಂಟೀನಾದ ಲಿಯೋನಲ್ ಮೆಸ್ಸಿ 8ನೇ ಸ್ಥಾನದಲ್ಲಿದ್ದಾರೆ. ಮೆಸ್ಸಿ ಇದುವರೆಗೆ 151 ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದು 76 ಗೋಲು ದಾಖಲಿಸಿದ್ದಾರೆ.