Cristiano Ronaldo...12 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಫುಟ್ಬಾಲ್ ಅಂಗಳದ ಆಕ್ರಮಣಕಾರಿ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತೆ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ಗೆ ಮರಳಿದ್ದಾರೆ. 2003 ರಲ್ಲಿ ಇಂಗ್ಲೆಂಡ್ನಲ್ಲಿನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಮ್ನಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಪರ ಮೊದಲ ಪಂದ್ಯವನ್ನಾಡಿದ್ದ ರೊನಾಲ್ಡೊ ಆ ಬಳಿಕ ಹಿಂತಿರುಗಿ ನೋಡಿಲ್ಲ. ಹಲವು ಕ್ಲಬ್ ಪರ ಕಣಕ್ಕಿಳಿದು ವಿಶ್ವದ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು.
ಇದೀಗ 12 ವರ್ಷಗಳ ಬಳಿಕ ರೊನಾಲ್ಡೊ ತಮ್ಮ ಹಳೆಯ ಕ್ಲಬ್ಗೆ ಹಿಂತಿರುಗಿದ್ದಾರೆ. ಕ್ರಿಸ್ಟಿಯಾನೊ ಜೊತೆಗಿನ ಒಪ್ಪಂದವನ್ನು ಮ್ಯಾಚೆಂಸ್ಟರ್ ಯುನೈಟೆಡ್ ಕ್ಲಬ್ ಮಂಗಳವಾರ ಅಧಿಕೃತಗೊಳಿಸಿದೆ. ಇದರ ಬೆನ್ನಲ್ಲೇ ತಮ್ಮ ಹಳೆಯ ಕ್ಲಬ್ ಪರ ಆಡಲು ರೊನಾಲ್ಡೊ ಪಡೆಯುತ್ತಿರುವ ಸಂಭಾವನೆ ಎಷ್ಟು ಎಂಬ ಕುತೂಹಲಕಾರಿ ಪ್ರಶ್ನೆಗಳೆದ್ದಿವೆ.
ಈ ಪ್ರಶ್ನೆಗೆ ಸಿಗುತ್ತಿರುವ ಉತ್ತರ ಬರೋಬ್ಬರಿ 23 ಮಿಲಿಯನ್ ಯುರೋ. ಆದರೆ ಈ ಮೊತ್ತವು ರೊನಾಲ್ಡೊ ಪಾಲಿಗೆ ಕಡಿಮೆನೇ. ಏಕೆಂದರೆ ಈ ಹಿಂದೆ ಯುವೆಂಟಸ್ ಪರ ರೊನಾಲ್ಡೊ ಪಡೆದಿದ್ದು ವರ್ಷಕ್ಕೆ 30 ಮಿಲಿಯನ್ ಯುರೋ ಆಗಿತ್ತು. ಇದೀಗ ಯುವೆಂಟಸ್ ತಂಡವನ್ನು ಅರ್ಧದಲ್ಲೇ ತೊರೆದು ರೊನಾಲ್ಡೊ ಯುನೈಟೆಡ್ ಪರ ಆಡಲು ಇಚ್ಛಿಸಿದ್ದಾರೆ. ಅದು ಕೂಡ ಕಡಿಮೆ ಮೊತ್ತ ಪಡೆದು ಎಂಬುದು ವಿಶೇಷ.
ಯುನೈಟೆಡ್ ಕ್ಲಬ್ ಜೊತೆ ಎರಡು ವರ್ಷಗಳ ಒಪ್ಪಂದ ಮಾಡಿಕೊಂಡಿರುವ ರೊನಾಲ್ಡೊ ವಾರ್ಷಿಕ 23 ಮಿಲಿಯನ್ ಯುರೋ ಪಡೆಯಲಿದ್ದಾರೆ. ಅದರಂತೆ ಪ್ರತಿ ಸೆಕೆಂಡ್ಗೆ ಕ್ರಿಸ್ಟಿಯಾನೊಗೆ ಸಿಗಲಿರುವ ಮೊತ್ತ 215 ರೂಪಾಯಿ ಎಂದರೆ ನಂಬಲೇಬೇಕು. ಇದನ್ನು ಪ್ರತಿ ಮಿನಿಟ್ಗೆ ವರ್ಗಾಯಿಸಿ ನೋಡುವುದಾದರೆ ಒಂದು ವರ್ಷದವರೆಗೆ ಪ್ರತಿ ನಿಮಿಷಕ್ಕೆ ಸುಮಾರು 15 ಸಾವಿರ ರೂ. ಜೇಬಿಗಿಳಿಸಿಕೊಳ್ಳಲಿದ್ದಾರೆ.
ಹೀಗೆ ವಾರ್ಷಿಕವಾಗಿ ಕ್ರಿಸ್ಟಿಯಾನೊ ರೊನಾಲ್ಡೊ ಪಡೆಯಲಿರುವ ಒಟ್ಟು ಮೊತ್ತ ಸುಮಾರು 198 ಕೋಟಿ ರೂ. ಅದರಂತೆ ರೊನಾಲ್ಡೊಗೆ ಮುಂದಿನ ಎರಡು ವರ್ಷ ಮ್ಯಾಚೆಂಸ್ಟರ್ ಯುನೈಟೆಡ್ ಕ್ಲಬ್ ನೀಡಲಿರುವ ಒಟ್ಟು ಮೊತ್ತ ಸುಮಾರು 396 ಕೋಟಿ ರೂ.
2003 ರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಆಡುವ ಅವಕಾಶಕ್ಕಾಗಿ ಎದುರು ನೋಡುತ್ತಿದ್ದ ಕ್ರಿಸ್ಟಿಯಾನೊ ರೊನಾಲ್ಡೊ ಇಂದು ಅದೇ ತಂಡದ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಅಲ್ಲದೆ ಯುನೈಟೆಡ್‌ಗಾಗಿ 2003-2009 ರ ನಡುವೆ ಎಂಟು ಪ್ರಮುಖ ಟ್ರೋಫಿಗಳನ್ನು ಗೆದ್ದುಕೊಟ್ಟಿದ್ದರು. ಅದರಲ್ಲೂ 2007-08ರ ಸೀಸನ್ನಲ್ಲಿ 42 ಗೋಲು ಬಾರಿಸಿ ಯುರೋಪ್ ಲೀಗ್ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ ಎನಿಸಿಕೊಂಡಿದ್ದರು.
ಮ್ಯಾಂಚೆಸ್ಟರ್ ಯುನೈಟೆಡ್‌ಗಾಗಿ 291 ಪಂದ್ಯಗಳನ್ನು ಆಡಿರುವ ರೊನಾಲ್ಡೊ 118 ಗೋಲು ಬಾರಿಸಿದ್ದಾರೆ. ಇದೀಗ ಮತ್ತೆ ರೆಡ್ ಜೆರ್ಸಿಯಲ್ಲಿ ಓಲ್ಡ್ ಟ್ರಾಫರ್ಡ್ನಲ್ಲಿ ಕಣಕ್ಕಿಳಿಯುವ ಮೂಲಕ ಹೊಸ ಸಂಚಲನ ಸೃಷ್ಟಿಸುವ ವಿಶ್ವಾಸದಲ್ಲಿದ್ದಾರೆ ಕ್ರಿಸ್ಟಿಯಾನೊ ರೊನಾಲ್ಡೊ.