ಭರ್ಜರಿ ಬೆಳೆ ಬಂದ್ರೂ ರೈತರಿಗಿಲ್ಲ ನೆಮ್ಮದಿ: ಪಾತಾಳಕ್ಕೆ ಕುಸಿದ ಬೆಲೆ, ರೈತರ ಗೋಳಾಟ
ಕಳೆದ ವರ್ಷ ಭೀಕರ ಬರಕ್ಕೆ ಬಿತ್ತಿದ ಬೀಜ ಭೂಮಿಯಲ್ಲೇ ಸುಟ್ಟು ಹೋಗಿತ್ತು. ಲಕ್ಷ ಲಕ್ಷ ರೂ. ಖರ್ಚು ಮಾಡಿದ ಅನ್ನದಾತ ದಿಕ್ಕು ತೋಚದೇ ಕಂಗಾಲಾಗಿದ್ದ. ಬರಡು ಭೂಮಿ ನೋಡಿ ರೈತರು ಕಣ್ಣೀರು ಹಾಕಿದ್ರು. ಆದ್ರೆ ಈ ವರ್ಷ ವರುಣದೇವ ಕೃಪೆ ತೋರಿದ್ದಾನೆ. ಹೀಗಾಗಿ ಬೆಳೆ ಕೂಡ ಭರ್ಜರಿಯಾಗಿ ಬಂದಿದೆ. ರೈತರು ಕೂಡ ಫುಲ್ ಖುಷಿಯಾಗಿದ್ದಾರೆ. ಆದ್ರೆ, ಆ ಖುಷಿ ಅನುಭವಿಸುವ ಭಾಗ್ಯ ನಮ್ಮ ರೈತರಿಗೆ ಇಲ್ಲದಂತಾಗಿದೆ.
1 / 6
ಗದಗ ಜಿಲ್ಲೆಯ ರೈತರಿಗೆ ಬೆಳೆ ಬಂದ್ರು ಬರದಿದ್ರು ಕಷ್ಟ ಎಂಬಂತಾಗಿದೆ. ಕಳೆದ ವರ್ಷ ಭೀಕರ ಬರ ರೈತರ ಬದುಕನ್ನು ಸರ್ವನಾಶ ಮಾಡಿತ್ತು. ಈ ವರ್ಷ ಭರ್ಜರಿ ಬೆಳೆ ಬಂದಿದೆ. ರೈತರು ಫುಲ್ ಖುಷಿಯಲ್ಲಿದ್ದಾರೆ. ಆದರೆ ಬೆಲೆ ಮಾತ್ರ ಕುಸಿದಿದೆ. ಹೀಗಾಗಿ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಕೂಡ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಿಲ್ಲ. ಹೀಗಾಗಿ ಅನ್ನದಾತರು ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.
2 / 6
ಸಾಲಸೋಲ ಮುಟ್ಟಿಸಿ ಈ ವರ್ಷ ನಮ್ಮ ಬದುಕು ಕಟ್ಟಿಕೊಳ್ಳಬಹುದು ಅಂತ ಕನಸು ಕಂಡಿದ್ದ ರೈತರು ಖುಷಿಯಿಂದಲೇ ಗದಗ ಎಪಿಎಂಸಿ ಮಾರಾಟಕ್ಕಾಗಿ ಹೆಸರು ಬೆಳೆ ತೆಗೆದುಕೊಂಡು ಬಂದಿದ್ದಾರೆ. ಒಳ್ಳೆಯ ಬೆಲೆ ಸಿಗುತ್ತೆ ಅನ್ನೋ ಖುಷಿಯಲ್ಲಿದ್ದ ಅನ್ನದಾತನಿಗೆ ಬರಸಿಡಿಲು ಬಡಿದಂತಾಗಿದೆ. ಕ್ವಿಂಟಾಲ್ ಹೆಸರು ಬೆಳೆಗೆ 9-10 ಸಾವಿರ ಇದ್ದ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಎಪಿಎಂಸಿ ಮಾರುಕಟ್ಟೆ ದರ ಕೇಳಿ ರೈತರು ಶಾಕ್ ಆಗಿದ್ದಾರೆ. ಕಳೆದ ವರ್ಷ ಬರ ನುಂಗಿದ್ದರೆ ಈ ವರ್ಷ ಬೆಳೆ ಚೆನ್ನಾಗಿದ್ದರು ದರ ನಮ್ಮ ಬದುಕೇ ನುಂಗಿ ಹಾಕಿದೆ ಅಂತ ರೈತರು ಗೋಳಾಡುತ್ತಿದ್ದಾರೆ.
3 / 6
ಗದಗ ಜಿಲ್ಲೆ ಅಂದ್ರೆ ಅದು ಹೆಸರು ಕಣಜ ಎಂದೇ ಫೇಮಸ್ ಆಗಿದೆ. ಯಾಕಂದ್ರೆ ರಾಜ್ಯದಲ್ಲೇ ಅತೀ ಹೆಚ್ಚು ಹೆಸರು ಬೆಳೆಯುವ ಜಿಲ್ಲೆ ಎಂಬ ಹೆಗ್ಗಳಿಕೆ ಪಡೆದಿದೆ. ಈ ವರ್ಷ ಗದಗ ಜಿಲ್ಲೆಯಲ್ಲಿ ಒಟ್ಟು ಹೇಕ್ಟರ್ನಲ್ಲಿ ರೈತರು ಹೆಸರು ಬೆಳೆದಿದ್ದಾರೆ. ಹೀಗಾಗಿ ನಿತ್ಯವೂ ಗದಗ ಎಪಿಎಂಸಿ ಮಾರುಕಟ್ಟೆಗೆ 10-12 ಸಾವಿರ ಕ್ವಿಂಟಾಲ್ ಹೆಸರು ಆಮದು ಆಗುತ್ತಿದೆ.
4 / 6
ಇಂದು ಬರೊಬ್ಬರಿ ಹತ್ತು ಸಾವಿರ ಕ್ವಿಂಟಾಲ್ ಹೆಸರು ಬೆಳೆ ಆಮದು ಆಗಿದೆ. ದಲ್ಲಾಳಿಗಳ ಕುತಂತ್ರದಿಂದ ದರ ಪಾತಾಳಕ್ಕೆ ಕುಸಿಯುವಂತಾಗಿದೆ ಎಂದು ರೈತರು ಕಿಡಿಕಾರಿದ್ದಾರೆ. ಹೀಗಾಗಿ ಸರ್ಕಾರ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯುವಂತೆ ಅನ್ನದಾತರು ಒತ್ತಾಯಿಸಿದ್ದಾರೆ.
5 / 6
ಈಗಾಗಲೇ ಖರೀದಿ ಕೇಂದ್ರ ಆರಂಭ ಮಾಡಬೇಕಿತ್ತು. ಸರ್ಕಾರ ಮಾಡಿಲ್ಲ. ರೈತರು ಎಲ್ಲ ಹೆಸರು ಬೆಳೆ ಮಾರಾಟ ಮಾಡಿದ ಬಳಿಕ ಖರೀದಿ ಕೇಂದ್ರ ಆರಂಭಿಸುತ್ತಾರೆ. ಇದು ರೈತರಿಗೆ ಅನುಕೂಲ ಆಗಲ್ಲ. ಬದಲಾಗಿ ದಲ್ಲಾಳಿಗಳಿಗೆ ಅನುಕೂಲ ಆಗಲಿದೆ ಅಂತ ರೈತರು ಕಿಡಿಕಾರಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರನ್ನು ಕೇಳಿದ್ರೆ, ಶೀಘ್ರದಲ್ಲೇ ಖರೀದಿ ಕೇಂದ್ರ ಆರಂಭಿಸಲಾಗುತ್ತೆ ಅಂತ ಹೇಳಿದ್ದಾರೆ.
6 / 6
ಭರ್ಜರಿ ಬೆಳೆ ಬಂದ್ರು ಉತ್ತರ ಕರ್ನಾಟಕದ ಅನ್ನದಾತರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ರಾಜ್ಯ, ಕೇಂದ್ರ ಸರ್ಕಾರಗಳು ಅನ್ನದಾತ ಸಂಕಷ್ಟಕ್ಕೆ ನೆರವಾಗಬೇಕಿದೆ.