ದುಗ್ಗಾವತಿ ದುಗ್ಗಮ್ಮ ಎಂದೇ ಪ್ರಸಿದ್ಧ. ಎರಡು ವರ್ಷಕ್ಕೊಮ್ಮೆ ನಡೆಯುವ ಇಲ್ಲಿನ ಜಾತ್ರೆ ಹತ್ತಾರು ಕಾರಣಕ್ಕೆ ಪ್ರಸಿದ್ಧಿ. ಬಳೆ ಅಂದ್ರೆ ಜಾತ್ರೆಯ ಜೀವಾಳ. ಹತ್ತಿರ ಹತ್ತಿರ ಒಂದು ಕೋಟಿ ರೂಪಾಯಿ ಬಳೆ ವಹಿವಾಟು ಇಲ್ಲಿ ಆಗುತ್ತದೆ. ಬಳೆಯೇ ಯಾಕೆ ಇಲ್ಲಿ ಪ್ರಸಿದ್ಧ. ಇಲ್ಲಿದೆ ನೋಡಿ ಬಳೆ ಮಹಿಮೆ.
ಹಂಸಲೇಖಾ ಬರೆದ ಹಸಿರು ಗಾಜಿನ ಬಳೆಗಳು ಸ್ತ್ರೀ ಕುಲದ ಶುಭ ಸ್ವರಗಳೇ ಎಂಬ ಹಾಡು ನಾಡಿನ ಬಹುತೇಕರ ಮನಸ್ಸಿನಲ್ಲಿ ಮನೆ ಮಾಡಿದೆ. ಇಲ್ಲೊಂದು ಕಣ್ಣು ಹಾಯಿಸಿ ಎಲ್ಲಿ ನೋಡಿದರಲ್ಲಿ ಬಳೆಗಳದ್ದೆ ಸದ್ದು. ನಾರಿ ಮಣಿಯರು ಹೆಜ್ಜೆ ಇಡಲು ಸ್ಥಳವಿಲ್ಲದ ಬಳೆ ಅಂಗಡಿಗಳಿಗೆ ನುಗ್ಗಿ ಇಷ್ಟದ ಬಳೆ ಖರೀದಿ ಮಾಡುತ್ತಾರೆ.
ಇನ್ನೊಂದು ಕಡೆ ನೋಡಿದರೆ ತಾಯಿ ದುರ್ಗಾಂಭಿಕೆಯ ಕೈಯಲ್ಲಿ ಅದ್ಭುತವಾದ ಹಸಿರು ಬಳೆಗಳು. ಇಲ್ಲಿ ಹೇಳುತ್ತಿರುವುದು ಬೆಣ್ಣೆ ನಗರಿ ದಾವಣಗೆರೆ ಐತಿಹಾಸಿಕ ದುರ್ಗಾಂಭಿಕಾ ದೇವಿಯ ಜಾತ್ರೆಯ ವಿಶೇಷ. ಬಹುತೇಕ ಕಡೆ ಒಂದು ದಿನ ಎರಡು ದಿನ ಐದು ದಿನ ಜಾತ್ರೆಗಳು ನಡೆಯುವುದನ್ನ ನೋಡಿದ್ದೇವೆ. ಆದ್ರೆ ಇಲ್ಲಿ ಮಾತ್ರ ಬರೋಬರಿ ಒಂದು ತಿಂಗಳ ಕಾಲ ಜಾತ್ರೆ ನಡೆಯುತ್ತದೆ.
ಈ ಜಾತ್ರೆ ಎಲ್ಲಕ್ಕಿಂತ ಹೆಚ್ಚಾಗಿ ವ್ಯಾಪಾರ ಆಗುವುದೇ ಬಳೆಯದ್ದು. ಒಂದೊಂದು ಅಂಗಡಿಗಳಲ್ಲಿ ಎರಡರಿಂದ ಮೂರು ಲಕ್ಷ ರೂಪಾಯಿ ವ್ಯಾಪಾರ ಖಚಿತ. ನೂರಾರು ಅಂಗಡಿಗಳಲ್ಲಿ ಕೋಟಿ ರೂಪಾಯಿ ಲೆಕ್ಕದಲ್ಲಿ ವ್ಯವಹಾರ ಆಗುತ್ತದೆ. ಬಳೆಗೆ ಯಾವ ಜಾತ್ರೆಯಲ್ಲಿಯೂ ಇರದಂತಹ ಮಹತ್ವ ಇಲ್ಲಿದೆ.
ಈ ದುರ್ಗಾಂಭಿಕೆ ಮೂಲತಃ ವಿಜಯ ನಗರ ಜಿಲ್ಲೆಯ ದುಗ್ಗಾವತಿಯ ಮೂಲದವಳು. ದುಗ್ಗಾವತ್ತಿ ದುಗ್ಗಮ್ಮ ಎನ್ನುತ್ತಾರೆ. ದುಗ್ಗಾವತಿಗೆ ದಾವಣಗೆರೆ ಮೂಲದ ಬಳೆಗಾರನೊಬ್ಬ ಬಳೆ ಮಾರಾಟಕ್ಕೆ ಹೋಗುತ್ತಿದ್ದ.
ಅಲ್ಲಿ ರೈತರು ಕೊಟ್ಟ ದವಸ ಧಾನ್ಯಗಳ ಚಕ್ಕಡಿಯ ಮೂಲಕ ತರುವ ಆ ಚಕ್ಕಡಿ ಮೂಲಕವೇ ಕರಿಕಲ್ಲಿನ ರೂಪದಲ್ಲಿ ಬಂದವಳು ದುಗ್ಗಮ್ಮ ಅಥವಾ ದುರ್ಗಾದೇವಿ. ಬಳೆಗಾರನ ಮೂಲಕ ಬಂದು ಇಲ್ಲಿ ಪ್ರತಿಷ್ಠಾಪನೆ ಗೊಂಡು ಖ್ಯಾತಿ ಗಳಿಸಿದ ದುಗ್ಗಮ್ಮನ ನೆನಪಿಗೆ ಬಂದವರು ಬಳೆ ಖರೀದಿ ಮಾಡಲೇ ಬೆೇಕು.
ವಿಶೇಷವಾಗಿ ಬಹುತೇಕರು ಇಲ್ಲಿ ಬಳೆ ವ್ಯಾಪಾರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವರು ಅಲ್ಪ ಸಂಖ್ಯಾತರೇ. ಕೆಲ ವರ್ಷಗಳ ಹಿಂದೆ ದುರ್ಗಾಂಭಿಕಾ ದೇವಿ ದೇವಸ್ಥಾನ ಧರ್ಮದರ್ಶಿ ಸಮಿತಿಯಲ್ಲಿ ಅಲ್ಪಸಂಖ್ಯಾತರು ಸಹ ಇದ್ದರು. ಇವರು ಹೈದ್ರಾಬಾದ್, ಮುಂಬಯಿ ಸೇರಿದಂತೆ ದೇಶದ ಬೇರೆ ಬೇರೆ ಭಾಗಗಳಿಂದ ಬೆಳೆಗಳನ್ನ ಖರೀದಿ ಮಾಡಿ ತರುತ್ತಾರೆ.
ಪ್ರತಿಯೊಂದು ಜಾತ್ರೆಗೂ ಇವರುಗಳು ಹೋಗುತ್ತಾರೆ. ಕೊಟ್ಟೂರು ಜಾತ್ರೆ ಮುಗಿಸಿಕೊಂಡು ನೇರವಾಗಿ ದಾವಣಗೆರೆಗೆ ಬರುತ್ತಾರೆ. ಗಾಜಿನ ಬಳೆ, ಮೆಟಲ್ ಬಳೆ, ಚಿನ್ನದ ಕೋಟ್ ಇರುವ ಚಿನ್ನದ ಬಳೆ ಹೂವಿನ ಬಳೆ. ಹತ್ತಾರು ಪ್ರಕಾರದ ಬಳೆಗಳನ್ನ ತರುತ್ತಾರೆ. ಎಲ್ಲ ಜಾತ್ರೆಯಲ್ಲಿ ಅತಿ ಹೆಚ್ಚು ವ್ಯಾಪಾರ ಆಗುವುದು ಅಥವಾ ಲಾಭವಾಗುವುದು ದಾವಣಗೆರೆ ದುಗ್ಗಮ್ಮನ ಜಾತ್ರೆಯಲ್ಲಿ.
ಬಳೆಗಾರನ ಬಂಡಿಯಲ್ಲಿ ಬಂದು ಆ ಬಂಡಿ ಈಗ ಇರುವ ದುರ್ಗಾಂಭಿಕಾ ದೇವಸ್ಥಾನದ ಸ್ಥಳದಲ್ಲಿಯೇ ಚಕ್ರ ಮುರಿದು ಬಿದ್ದು ಇಲ್ಲಿಗೇ ದುಗ್ಗಾವತಿಯಿಂದ ಬಂದ ಕರಿಕಲ್ಲಿನ ರೂಪದಲ್ಲಿದ್ದ ದುಗ್ಗಮ್ಮ ನೆಲೆಸಿದ್ದರಿಂದ ಶತಮಾನಗಳ ಹಿಂದೆ ಇಲ್ಲೊಂದು ಪುಣ್ಯ ಕ್ಷೇತ್ರವಾಗಿ ಉದಯವಾಯಿತು. ಹೀಗೆ ಬಳೆಗಾರನೇ ಕರೆತಂದ ದೇವತೆ. ದೇವತೆಗೆ ಬಳೆ ಅಂದ್ರೆ ಪಂಚಪ್ರಾಣ. ಹೀಗಾಗಿ ಇಲ್ಲಿ ಬಳೆಗಳ ವ್ಯಾಪಾರ ಅತಿ ಹೆಚ್ಚು ಎಂಬುದು ಒಂದು ವಾಡಿಕೆ ಆಗಿದೆ.