- Kannada News Photo gallery Delhi Meerut RRTS Corridor Indias first RapidX Train set to Inagurate all you need to Know
RapidX Train: ಭಾರತದ ಮೊದಲ ರ‍್ಯಾಪಿಡ್‌ಎಕ್ಸ್ ರೈಲಿನ ವಿಶೇಷತೆಗಳೇನು?
ದೆಹಲಿ-ಮೀರತ್ ಕಾರಿಡಾರ್‌ನ ಒಟ್ಟು ಉದ್ದ 82 ಕಿಲೋಮೀಟರ್ ಆಗಿದ್ದು, ರ‍್ಯಾಪಿಡ್‌ಎಕ್ಸ್ ರೈಲು 1 ಗಂಟೆಯಲ್ಲಿ ದೆಹಲಿಯಿಂದ ಮೀರತ್‌ಗೆ ಸಂಚರಿಸುತ್ತದೆ. ಈ ಯೋಜನೆಯನ್ನು 30,274 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ರೈಲುಗಳಲ್ಲಿ ಲಗೇಜ್ ಕ್ಯಾರಿಯರ್‌ಗಳು, ಮಿನಿ ಸ್ಕ್ರೀನ್‌ಗಳು, ವೈ-ಫೈ, ಮೊಬೈಲ್ ಮತ್ತು ಲ್ಯಾಪ್‌ಟಾಪ್ ಚಾರ್ಜಿಂಗ್ ಸೌಲಭ್ಯಗಳನ್ನು ಪ್ರತಿ ಸೀಟಿನಲ್ಲಿಯೂ ಅಳವಡಿಸಲಾಗಿದೆ.
Updated on: Oct 19, 2023 | 4:23 PM

ಶುಕ್ರವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಭಾರತದ ಮೊದಲ ಇಂಟರ್‌ಸಿಟಿ ರ‍್ಯಾಪಿಡ್ ರೈಲಾದ ‘ರ‍್ಯಾಪಿಡ್‌ಎಕ್ಸ್’ಗೆ ಚಾಲನೆ ನೀಡಲಿದ್ದಾರೆ. ಭಾರತದಲ್ಲಿ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್‌ಆರ್‌ಟಿಎಸ್) ಆರಂಭದ ಅಂಗವಾಗಿ ಪಿಎಂ ಮೋದಿ ಸಾಹಿಬಾಬಾದ್‌ನಿಂದ ದುಹೈ ಡಿಪೋಗೆ ಸಂಪರ್ಕಿಸುವ ರಾಪಿಡ್‌ಎಕ್ಸ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ.

ಮೊದಲ ಹಂತದಲ್ಲಿ ಈ ರಾಪಿಡ್ ರೈಲು ಸಾಹಿಬಾಬಾದ್, ಗಾಜಿಯಾಬಾದ್ ಗುಲ್ಧರ್, ದುಹೈ ಮತ್ತು ದುಹೈ ಡಿಪೋ ಸೇರಿದಂತೆ 5 ನಿಲ್ದಾಣಗಳ ನಡುವೆ ಸಂಚರಿಸಲಿದೆ. ಎನ್‌ಸಿಆರ್‌ನಲ್ಲಿ ಒಟ್ಟು 8 ಆರ್‌ಆರ್‌ಟಿಎಸ್ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ದೆಹಲಿ-ಘಾಜಿಯಾಬಾದ್-ಮೀರತ್ ಕಾರಿಡಾರ್‌ಗೆ ಪ್ರಧಾನ ಮಂತ್ರಿ ಮೋದಿ 2019ರ ಮಾರ್ಚ್ 8ರಂದು ಶಂಕುಸ್ಥಾಪನೆ ನೆರವೇರಿಸಿದ್ದರು.

ಆರ್‌ಆರ್‌ಟಿಎಸ್ ಅನ್ನು ದೇಶದಲ್ಲಿಯೇ ಅಭಿವೃದ್ಧಿಪಡಿಸಲಾಗುತ್ತಿದೆ. ಇದು ಅತ್ಯಾಧುನಿಕ ಪ್ರಾದೇಶಿಕ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಿದೆ. ಈ ವಿಶೇಷ ರೈಲಿನ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಕೆಲವು ವಿವರಗಳು ಇಲ್ಲಿವೆ. ಈ ರಾಪಿಡ್ ಎಕ್ಸ್ ರೈಲು ದೆಹಲಿಯಿಂದ ಮೀರತ್‌ಗೆ ಕೇವಲ 60 ನಿಮಿಷಗಳಲ್ಲಿ ಪ್ರಯಾಣಿಸುತ್ತದೆ.

ದೆಹಲಿ-ಗಾಜಿಯಾಬಾದ್-ಮೀರತ್ RRTS ಭಾರತದಲ್ಲಿ ಮೊದಲ ಹಂತದಲ್ಲಿ ಅನುಷ್ಠಾನಕ್ಕೆ ಯೋಜಿಸಲಾದ 3 ಕಾರಿಡಾರ್‌ಗಳಲ್ಲಿ ಮೊದಲನೆಯದು. ಇದರ ನಂತರ ದೆಹಲಿ-ಗುರುಗ್ರಾಮ-ಎಸ್ಎನ್ಬಿ-ಅಲ್ವಾರ್ ಮತ್ತು ದೆಹಲಿ-ಪಾಣಿಪತ್ ಕಾರಿಡಾರ್‌ಗಳು ಸಿದ್ಧವಾಗಲಿವೆ.

ದೆಹಲಿ-ಮೀರತ್ ಕಾರಿಡಾರ್‌ನ ಒಟ್ಟು ಉದ್ದ 82 ಕಿಲೋಮೀಟರ್ ಆಗಿದ್ದು, ಇದು 1 ಗಂಟೆಯಲ್ಲಿ ದೆಹಲಿಯಿಂದ ಮೀರತ್‌ಗೆ ಸಂಚರಿಸುತ್ತದೆ.

ಈ ಯೋಜನೆಯನ್ನು 30,274 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಯೋಜನೆಗೆ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್, ನ್ಯೂ ಡೆವಲಪ್‌ಮೆಂಟ್ ಬ್ಯಾಂಕ್ ಮತ್ತು ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ ಹಣವನ್ನು ನೀಡಿದೆ.

ರಾಪಿಡ್‌ಎಕ್ಸ್ ರೈಲು ಮೆಟ್ರೋ ರೈಲುಗಳಂತೆಯೇ ಕಾಣುತ್ತದೆ. ಆದರೆ, NCRTC ನೀಡಿದ ಮಾಹಿತಿ ಪ್ರಕಾರ, ಆರ್‌ಆರ್‌ಟಿಎಸ್ ಮೆಟ್ರೋ ರೈಲಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ.

ಈ ಯೋಜನೆಯನ್ನು ಭಾರತ ಸರ್ಕಾರ ಮತ್ತು ದೆಹಲಿ, ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶ ಸರ್ಕಾರಗಳ ಜಂಟಿ ಉದ್ಯಮವಾದ ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ಸಂಸ್ಥೆ (NCRTC) ಅಭಿವೃದ್ಧಿಪಡಿಸಿದೆ.

RRTS ರೈಲುಗಳು ಪ್ರೀಮಿಯಂ ಮಾಡೆಲ್ನ ಕಾರುಗಳ ರೀತಿ ವಿಶಾಲವಾದ ಸೀಟುಗಳು, ಹೆಚ್ಚು ಲೆಗ್‌ರೂಮ್ ಮತ್ತು ಕೋಟ್ ಹ್ಯಾಂಗರ್‌ಗಳನ್ನು ಹೊಂದಿರುತ್ತದೆ.

ಈ ರೈಲುಗಳಲ್ಲಿ ಲಗೇಜ್ ಕ್ಯಾರಿಯರ್‌ಗಳು, ಮಿನಿ ಸ್ಕ್ರೀನ್‌ಗಳು, ವೈ-ಫೈ, ಮೊಬೈಲ್ ಮತ್ತು ಲ್ಯಾಪ್‌ಟಾಪ್ ಚಾರ್ಜಿಂಗ್ ಸೌಲಭ್ಯಗಳನ್ನು ಪ್ರತಿ ಸೀಟಿನಲ್ಲಿಯೂ ಅಳವಡಿಸಲಾಗಿದೆ.

RRTS ರೈಲುಗಳನ್ನು ಗಂಟೆಗೆ 180 ಕಿ.ಮೀ ವೇಗದಲ್ಲಿ ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಭಾರತದಲ್ಲಿ ತ್ವರಿತ ನಗರ ಸಾರಿಗೆ ವ್ಯವಸ್ಥೆಯನ್ನು ಮಾಡುತ್ತದೆ. ಪ್ರತಿ ರೈಲು 2X2 ಲೇಔಟ್‌ನಲ್ಲಿ 407 ಆಸನಗಳನ್ನು ಹೊಂದಿರುತ್ತದೆ.

ರಾಪಿಡ್‌ಎಕ್ಸ್ ರೈಲು ಪ್ರೀಮಿಯಂ ಕೋಚ್ ಸೇರಿದಂತೆ 6 ಕೋಚ್‌ಗಳನ್ನು ಹೊಂದಿರುತ್ತದೆ. ಪ್ರತಿ ರೈಲಿನಲ್ಲಿ ಒಂದು ಕೋಚ್ ಅನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಇದು ಪ್ರೀಮಿಯಂ ಕೋಚ್‌ನ ಪಕ್ಕದ ಕೋಚ್ ಆಗಿದೆ. ಈ ಕೋಚ್‌ಗಳಲ್ಲಿ ಸೀಟುಗಳನ್ನು ಕ್ರಮವಾಗಿ ನಂಬರ್ ಮಾಡಲಾಗಿದೆ. ಅಲ್ಲದೆ, ಇತರ ಕೋಚ್‌ಗಳಲ್ಲಿ ಮಹಿಳೆಯರು, ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗೆ ಮೀಸಲು ಸೀಟುಗಳಿವೆ.




