ಬಣ್ಣ ಬಣ್ಣದ ಹೂವಿನ ಲೋಕ ಸೃಷ್ಠಿಸಿದ ಧಾರವಾಡದ ಕೃಷಿ ಮೇಳ; ಇಲ್ಲಿದೆ ಫೋಟೋಸ್
ಹೂವು ಅಂದರೆ ಯಾರಿಗೆ ಇಷ್ಟವಾಗೋಲ್ಲ ಹೇಳಿ? ಹೂವು ಪರಿಸರದ ಅದ್ಭುತ ಸೃಷ್ಟಿ. ಈ ಹೂವುಗಳ ಲೋಕದಲ್ಲಿ ಮುಳುಗಿದರೆ ಹೊತ್ತು ಹೋಗೋದೇ ಗೊತ್ತಾಗೋದಿಲ್ಲ. ಇಂಥ ಅದ್ಭುತ ಹೂವುಗಳ ನೂರಾರು ಬಗೆ ಒಂದೇ ಸೂರಿನಲ್ಲಿ ನೋಡಲು ಸಿಕ್ಕರೆ? ಸ್ವರ್ಗವೇ ಧರೆಗಿಳಿದ ಅನುಭೂತಿಯಲ್ಲವೇ? ಅಂಥ ಅನುಭೂತಿಗೆ ಧಾರವಾಡದ ಕೃಷಿ ಮೇಳ ಸಾಕ್ಷಿಯಾಗಿದೆ.
1 / 7
ಗುಲಾಬಿ, ಸೇವಂತಿ, ಕಾರ್ನೇಶನ್, ಅಂಥೋರಿಯಂ, ಗ್ಲ್ಯಾಡಿಯೋಲಸ್, ಲಿಲ್ಲಿ, ಜರ್ಬೆರಾ- ಒಂದಾ? ಎರಡಾ? ನೂರಾರು ಬಗೆಯ ಹೂವುಗಳ ರಾಶಿ. ಅದನ್ನು ಅಚ್ಚರಿಯಿಂದ ಸಂತೋಷದಿಂದ ನೋಡುತ್ತಿರುವ ಯುವತಿಯರು ಮತ್ತು ಮಕ್ಕಳು. ತಮ್ಮವರೊಂದಿಗೆ ಸೆಲ್ಫಿ ತೆಗೆದುಕೊಂಡು ಖುಷಿ ಪಡುತ್ತಿರುವ ಯುವಕರು. ಇಂಥ ಬಗೆ ಬಗೆಯ ಬಣ್ಣ ಬಣ್ಣದ ಹೂವುಗಳ ಲೋಕಕ್ಕೆ ಸಾಕ್ಷಿಯಾಗಿದ್ದು ಧಾರವಾಡದ ಕೃಷಿ ಮೇಳ.
2 / 7
ಇಡೀ ಕೃಷಿ ಮೇಳಕ್ಕೆ ಒಂದು ಬಗೆಯ ಆಕರ್ಷಣೆ ಇದ್ದರೆ, ಅದೆಲ್ಲಕ್ಕಿಂತ ದೊಡ್ಡದಾದ ಆಕರ್ಷಣೆ ಈ ಫಲಪುಷ್ಪ ಪ್ರದರ್ಶನದ್ದು. ಕೃಷಿ ಮೇಳಕ್ಕೆ ಬರುವ ಬಹುತೇಕರು ಮರೆಯದೇ ಭೇಟಿ ಕೊಡೋದು ಈ ಫಲ-ಪುಷ್ಪ ಪ್ರದರ್ಶನದ ಸ್ಥಳಕ್ಕೆ.
3 / 7
ರೈತರ ಜನಾಭಿವೃದ್ಧಿ ಕೇಂದ್ರದ ಕಟ್ಟಡದಲ್ಲಿ ಆಯೋಜಿಸಲಾಗಿರೋ ಈ ಫಲ-ಪುಷ್ಪ ಪ್ರದರ್ಶನ ಕೃಷಿ ಮೇಳದ ಹೈಲೈಟ್ ಅಂದರೆ ತಪ್ಪಾಗಲಾರದು. ಈ ಪ್ರದರ್ಶನದಲ್ಲಿ ಒಂದೆಡೆ ಹೂವುಗಳು ತಮ್ಮ ಸೌಂದರ್ಯವನ್ನು ಜಗತ್ತಿಗೆ ತೋರಿಸುತ್ತಿದ್ದರೆ, ಅವುಗಳನ್ನು ನೋಡಲು ಬರೋ ಯುವತಿಯರು, ಮಹಿಳೆಯರು, ಮಕ್ಕಳು ಅವುಗಳ ಅಂದ, ಬಣ್ಣ ನೋಡಿ ಜಗತ್ತನ್ನೇ ಮರೆಯೋ ಖುಷಿಯಲ್ಲಿದ್ದರು.
4 / 7
ಅದರೊಂದಿಗೆ ಪ್ರತಿಯೊಂದು ಹೂವಿನ ಮುಂದೆ ನಿಂತುಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಳ್ಳೋ ಸಂಭ್ರಮ. ಗಂಟೆಗಟ್ಟಲೇ ಸುತ್ತಿದರೂ ನೋಡಲು ಮುಗಿಯದಷ್ಟು ಹೂವುಗಳ ವೆರೈಟಿ. ಇನ್ನು ಕೇವಲ ಸುಂದರ ಹೂವಿಗಷ್ಟೇ ಇಲ್ಲಿ ಅವಕಾಶ ಅನ್ನುವಂತಿಲ್ಲ. ಇವುಗಳೊಂದಿಗೆ ಬೋನ್ಸಾಯಿ ಮರಗಳು, ಜನರ ಗಮನ ಸೆಳೆದವು.
5 / 7
ಇನ್ನು ಕಲ್ಲಂಗಡಿ ಹಣ್ಣುಗಳಲ್ಲಿ ನಾಡಿನ ಗಣ್ಯರ ಭಾವಚಿತ್ರಗಳನ್ನು ಕೆತ್ತಿದ ಕಲೆಯಂತೂ ಎಲ್ಲರನ್ನೂ ಕೈಬೀಸಿ ಕರೆಯುತ್ತಿವೆ. ಇದರೊಂದಿಗೆ ಬಗೆ ಬಗೆಯ ಹೂವುಗಳಿಂದ ತಯಾರಿಸಿರೋ ಬಗೆ ಬಗೆಯ ಕಲಾಕೃತಿಗಳು ಹಾಗೂ ಹೂವುಗಳಿಂದಲೇ ಮಾಡಿರೋ ರಂಗೋಲಿ ಎಲ್ಲರನ್ನು ಬೆರಗುಗೊಳಿಸುತ್ತಿವೆ.
6 / 7
ಇನ್ನು ಸಿರಿಧಾನ್ಯಗಳನ್ನು ಉತ್ತೇಜಿಸುವ ಹಾಗೂ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸುವ ದೃಷ್ಟಿಯಿಂದ ಈ ಬಾರಿ ಸುಸ್ಥಿರ ಕೃಷಿಗಾಗಿ ಸಿರಿಧಾನ್ಯಗಳು ಘೋಷವಾಕ್ಯದಡಿ ಕೃಷಿ ಮೇಳವವನ್ನು ಆಯೋಜಿಸಲಾಗಿದೆ. ಇದೇ ಕಾರಣಕ್ಕೆ ಹೂವುಗಳೊಂದಿಗೆ ಸಿರಿ ಧಾನ್ಯಗಳನ್ನು ಬಳಸಿಕೊಂಡು ಬಗೆ ಬಗೆಯ ಕಲಾಕೃತಿ ಹಾಗೂ ರಂಗೋಲಿಗಳನ್ನು ಬಿಡಿಸಲಾಗಿದೆ.
7 / 7
ಇವುಗಳಂತೂ ಜನರನ್ನು ವಿಶೇಷವಾಗಿ ಆಕರ್ಷಿಸುತ್ತಿವೆ. ಒಟ್ಟಿನಲ್ಲಿ ಈ ಬಾರಿ ಬರ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಬರೋದಿಲ್ಲ ಅಂದುಕೊಂಡರೂ ಈ ಪ್ರದರ್ಶನವನ್ನು ನೋಡಿದರೆ ಆ ಮಾತು ಸುಳ್ಳು ಅನ್ನೋದು ಸಾಬೀತಾಗುತ್ತಿದೆ.