ಎಲ್ಲಾದರೂ ಹೋಗುವಾಗ ಬೆಕ್ಕು ದಾರಿಗೆ ಅಡ್ಡವಾಗಿ ಬಂದರೆ ಅದನ್ನು ಕೆಟ್ಟದು, ಅಪಶಕುನ ಎಂದು ನಂಬುವವರೇ ಹೆಚ್ಚು. ಆದರೆ ಈ ಜಿಲ್ಲೆಯಲ್ಲಿ ಬೆಕ್ಕನ್ನು ಶುಭಸೂಚಕ ಎಂದು ನಂಬುವುದಲ್ಲದೆ, ಬೆಕ್ಕನ್ನು ಪೂಜಿಸಲಾಗುತ್ತದೆ.
ಈ ಬೆಕ್ಕಿನ ದೇವಾಲಯ ಇರುವುದು ಮಂಡ್ಯ ಜಿಲ್ಲೆಯಲ್ಲಿ. ಮಂಡ್ಯದಿಂದ ಸರಿಸುಮಾರು 35 ಕಿ.ಮೀ ದೂರದಲ್ಲಿ ಬೆಕ್ಕಾಲಲೆ ಎನ್ನುವ ಹಳ್ಳಿಯಲ್ಲಿ ಈ ವಿಶೇಷ ದೇವಾಲಯವನ್ನು ಕಾಣಬಹುದು. ಇಲ್ಲಿ ಬೆಕ್ಕನ್ನು ಮಂಗಮ್ಮ ದೇವಿಯ ರೂಪದಲ್ಲಿ ಪೂಜಿಸಲಾಗುತ್ತದೆ.
ಸರಿ ಸುಮಾರು 1000 ವರ್ಷಗಳಿಂದ ಈ ಆಚರಣೆ ಜಾರಿಯಲ್ಲಿದೆ. ಈ ಮಂಗಮ್ಮ ದೇವಿಯು ದುಷ್ಟಶಕ್ತಿಗಳಿಂದ ಊರನ್ನು ಕಾಯುತ್ತಾರೆಯಂತೆ. ಬೆಕ್ಕನ್ನು ಪೂಜಿಸಲಾಗುವ ಈ ಊರಿನಲ್ಲಿ ಬೆಕ್ಕಿಗೆ ಯಾರು ಹಿಂಸೆ ಮಾಡುವುದಿಲ್ಲ.
ಅದಲ್ಲದೇ ಈ ಹಳ್ಳಿಯಲ್ಲಿ ಎಲ್ಲಿಯಾದರೂ ಬೆಕ್ಕುಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುವುದನ್ನು ನಿವಾಸಿಗಳು ಗಮನಿಸಿದರೆ ಅಪರಾಧಿಗಳನ್ನು ಹಿಡಿದು ಶಿಕ್ಷಿಸಲಾಗುತ್ತದೆ. ಈ ಗ್ರಾಮದ ಆಸುಪಾಸಿನಲ್ಲಿ ಯಾರಿಗಾದರೂ ಬೆಕ್ಕಿನ ಶವ ಕಂಡರೆ ಗೌರವಯುತವಾಗಿ ಹೂಳುವ ಹೊಣೆಗಾರಿಕೆ ವಹಿಸಿಕೊಳ್ಳುತ್ತಾರೆ. ಪ್ರತಿ ವರ್ಷವು ಇಲ್ಲಿ ಬೆಕ್ಕಿನ ರೂಪದಲ್ಲಿ ಪೂಜಿಸಲಾಗುವ ಮಂಗಮ್ಮಉತ್ಸವವು ಅದ್ದೂರಿಯಾಗಿ ನಡೆಯುತ್ತದೆ.
ಇಲ್ಲಿನ ಸ್ಥಳೀಯ ಜ್ಯೋತಿಷಿಗಳು ಹಬ್ಬವನ್ನು ನಡೆಸಲು ಅತ್ಯಂತ ಮಂಗಳಕರವಾದ ದಿನವನ್ನು ಗೊತ್ತು ಪಡಿಸುತ್ತಾರೆ..ಮಂಗಮ್ಮ ಉತ್ಸವವು ಬಹಳಷ್ಟು ವಿಜೃಂಭಣೆ ಹಾಗೂ ಅದ್ದೂರಿಯಾಗಗಿ ನಡೆಯುತ್ತದೆ. ಮೂರು ನಾಲ್ಕು ದಿನಗಳ ಕಾಲ ನಡೆಯುವ ಈ ಉತ್ಸವವನ್ನು ಊರಿನವರೆಲ್ಲರೂ ಜೊತೆ ಸೇರಿ ಆಚರಿಸುತ್ತಾರೆ.