
ಚಿಕ್ಕಮಗಳೂರು: ಅರಣ್ಯವನ್ನ ರಕ್ಷಣೆ ಮಾಡಬೇಕಾದ ಅಧಿಕಾರಿ ಅರಣ್ಯ ಸಂಪತ್ತನ್ನ ಲೂಟಿ ಮಾಡಲು ಹೋಗಿ ಅಮಾನತು ಆಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಮೀಸಲು ಅರಣ್ಯ ವಲಯ ವ್ಯಾಪ್ತಿಯಲ್ಲಿ ನಡೆದಿದೆ. ಆಲ್ದೂರು ಸಮೀಪದ ಬಸರವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅನಿಗನಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಬೀಟೆ ಮರವನ್ನ ಕಡಿದು ಮಾರಾಟ ಮಾಡಿದ್ದ ಆಲ್ದೂರು ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ ದರ್ಶನ್ ಸಿಕ್ಕಿಬಿದ್ದಿದ್ದು, ಅವರನ್ನ ಅಮಾನತು ಮಾಡಿ DFO ಕ್ರಾಂತಿ ಆದೇಶ ಮಾಡಿದ್ದಾರೆ.

ಅನಿಗನಹಳ್ಳಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಬೀಟೆ ಮರವನ್ನ ಅಕ್ರಮವಾಗಿ ಕಡಿದು ಮಾರಾಟ ಮಾಡಲಾಗಿದೆ ಎಂದು DFOಗೆ ಸ್ಥಳೀಯರು ನೀಡಿದ ದೂರಿನ ಮೇರೆಗೆ ತನಿಖೆ ನಡೆಸಲಾಗಿತ್ತು. ಚಿಕ್ಕಮಗಳೂರು DFO ಕ್ರಾಂತಿ ನೇತೃತ್ವದಲ್ಲಿ ಮೀಸಲು ಅರಣ್ಯದಲ್ಲಿ ಬೀಟೆ ಮರ ಕಳ್ಳತನಕ್ಕೆ ಸಂಬಂಧಿಸಿದಂತೆ ಹರೀಶ್, ಪ್ರದೀಪ್, ಮಂಜು ಬೇಲೂರಿನ ಮರದ ಮಿಲ್ಲಿನ ಮಾಲೀಕ ಸಿರಾಜ್ ನನ್ನ ಬಂಧನ ಮಾಡಿ ವಿಚಾರಣೆ ನಡೆಸಲಾಗಿತ್ತು.

ನಾಲ್ವರು ಆರೋಪಿಗಳು ತನಿಖೆಯ ವೇಳೆ ಆಲ್ದೂರು ಉಪವಲಯ ಅರಣ್ಯಾಧಿಕಾರಿ ದರ್ಶನ್ ಅವರೇ ಮರವನ್ನ ಕಡಿಸಿ ಮಾರಾಟ ಮಾಡಿರುವ ಕುರಿತು ಹೇಳಿಕೆ ನೀಡಿದ್ದು. ಅರಣ್ಯ ಇಲಾಖೆಯ ತನಿಖೆಯ ವೇಳೆ ದರ್ಶನ್ ಮರವನ್ನ ಕಡಿದು ಮಾರಾಟ ಮಾಡಿರುವುದು ಸಾಬೀತಾದ ಹಿನ್ನೆಲೆ ನೋಟಿಸ್ ನೀಡಿ ಅಮಾನತು ಮಾಡಲಾಗಿದೆ.

ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಸಿಗುವ ಲಕ್ಷಾಂತರ ಮೌಲ್ಯದ ಮರಗಳನ್ನು ಅಕ್ರಮವಾಗಿ ಕಡಿದು, ಅರಣ್ಯ ಇಲಾಖೆಯ ಸಿಬ್ಬಂದಿ ತಮ್ಮ ಮನೆಗಳ ಪೀಠೋಪಕರಣ ಮತ್ತು ಬೀಟೆ ಮರಗಳನ್ನು ಮಾರಾಟ ಮಾಡಿ ಅಕ್ರಮವಾಗಿ ಹಣಗಳಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಚಿಕ್ಕಮಗಳೂರು ಜಿಲ್ಲೆಯ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಳಿ ಬರುತ್ತಿದ್ದು ಮೀಸಲು ಅರಣ್ಯದಲ್ಲಿ ಕಳ್ಳತನವಾಗಿರುವ ಮರಗಳ ಕುರಿತು ಸಮಗ್ರ ತನಿಖೆಗೆ ನಡೆಸುವಂತೆ ಸ್ಥಳೀಯರು, ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.

ಒಟ್ನಲ್ಲಿ ಅರಣ್ಯವನ್ನ ಉಳಿಸಿ ರಕ್ಷಣೆ ಮಾಡಬೇಕಾದ ಅಧಿಕಾರಿಗಳೇ ಹಣದ ಆಸೆಗೆ ಬಿದ್ದು ಲಕ್ಷಾಂತರ ರೂಪಾಯಿ ಬೆಲೆಬಾಳುವ, ಮಲೆನಾಡು ಭಾಗದಲ್ಲಿ ಸಿಗುವ ಅಪರೂಪದ ಮರಗಳನ್ನ ಕಡಿದು ಮಾರಾಟ ಮಾಡ್ತಾ ಇರೋದು ವಿಪರ್ಯಾಸವೇ ಸರಿ.
Published On - 10:44 am, Thu, 2 February 23