ವಿದೇಶಿ ತಂಡದ ನಾಯಕತ್ವನ್ನು ತ್ಯಜಿಸಿ ಭಾರತದಲ್ಲಿ ಕಣಕ್ಕಿಳಿಯಲಿರುವ ಸ್ಟಾರ್ ಆಟಗಾರ
TV9 Web | Updated By: ಝಾಹಿರ್ ಯೂಸುಫ್
Updated on:
Aug 30, 2021 | 3:10 PM
Anshuman Rath: ಆರಂಭಿಕ ಬ್ಯಾಟ್ಸ್ಮನ್, ವಿಕೆಟ್ ಕೀಪರ್ ಹಾಗೂ ಬೌಲರ್ ಜವಾಬ್ದಾರಿಯನ್ನು ಅಂಶುಮಾನ್ ನಿರ್ವಹಿಸಿದ್ದರು. ಅದರಂತೆ ರಾತ್ ಹೆಸರಿನಲ್ಲಿ ಒಟ್ಟು 19 ಅಂತಾರಾಷ್ಟ್ರೀಯ ವಿಕೆಟ್ಗಳಿವೆ.
1 / 7
ಅದು 2018, ದುಬೈ ಇಂಟರ್ನ್ಯಾಷನಲ್ ಸ್ಡೇಡಿಯಂನಲ್ಲಿ ನಡೆದ ಏಷ್ಯಾಕಪ್ನಲ್ಲಿ ಭಾರತ-ಹಾಂಕಾಂಗ್ ತಂಡಗಳು ಮುಖಾಮುಖಿಯಾಗಿದ್ದವು. ಕ್ರಿಕೆಟ್ ಶಿಶು ಹಾಂಕಾಂಗ್ ತಂಡವನ್ನು ಭಾರತ ತಂಡ ಸುಲಭವಾಗಿ ಬಗ್ಗು ಬಡಿಯಲಿದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಆ ನಿರೀಕ್ಷೆ ಹುಸಿಯಾಗಿತ್ತು. ಭಾರತ ನೀಡಿದ 286 ರನ್ಗಳ ಗುರಿ ಬೆನ್ನತ್ತಿದ ಹಾಂಕಾಂಗ್ ತಂಡವು ಭರ್ಜರಿ ಪೈಪೋಟಿ ನೀಡಿತು. ರೋಚಕ ಹೋರಾಟದಲ್ಲಿ ಹಾಂಕಾಂಗ್ ತಂಡ 8 ವಿಕೆಟ್ ನಷ್ಟಕ್ಕೆ 259 ರನ್ಗಳಿಸಿ 26 ರನ್ಗಳಿಂದ ವಿರೋಚಿತವಾಗಿ ಸೋಲೊಪ್ಪಿಕೊಂಡಿತು.
2 / 7
ಅಂದು ಟೀಮ್ ಇಂಡಿಯಾಗೆ ಸೋಲಿನ ಭಯ ಹುಟ್ಟಿಸಿದ್ದು ಹಾಂಕಾಂಗ್ ತಂಡದ ನಾಯಕ ಅಂಶುಮಾನ್ ರಾತ್. ಆ ಪಂದ್ಯದಲ್ಲಿ 73 ರನ್ ಸಿಡಿಸಿ ಟೀಮ್ ಇಂಡಿಯಾ ಬೌಲರುಗಳನ್ನು ಬೆಂಡೆತ್ತಿದ್ದರು. ಮೂಲತಃ ಭಾರತೀಯರಾಗಿರುವ ರಾತ್ ಅಂತಾರಾಷ್ಟ್ರೀಯ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದು ಹಾಂಕಾಂಗ್ ಪರ ಎಂಬುದು ವಿಶೇಷ.
3 / 7
ಅದರಂತೆ ಅಂಶುಮಾನ್ ರಾತ್ ಹಾಂಕಾಂಗ್ ಪರ 18 ಏಕದಿನ ಮತ್ತು 20 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ವೇಳೆ ಒನ್ಡೇ ಕ್ರಿಕೆಟ್ನಲ್ಲಿ 7 ಅರ್ಧಶತಕ ಹಾಗೂ ಒಂದು ಶತಕದೊಂದಿಗೆ 827 ರನ್ ಬಾರಿಸಿದ್ದಾರೆ. ಹಾಗೆಯೇ ಟಿ20ಯಲ್ಲಿ 321 ಕಲೆಹಾಕಿದ್ದಾರೆ. ಇದಲ್ಲದೆ 20ನೇ ವಯಸ್ಸಿನಲ್ಲೇ ಯುವ ಬ್ಯಾಟ್ಸ್ಮನ್ ಹಾಂಕಾಂಗ್ ತಂಡದ ಸಾರಥ್ಯವನ್ನು ವಹಿಸಿಕೊಂಡಿದ್ದರು ಎಂಬುದು ವಿಶೇಷ. ಆದರೀಗ ಹಾಂಕಾಂಗ್ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ.
4 / 7
ಬದಲಾಗಿ ಭಾರತದಲ್ಲಿ ಹೊಸ ಇನಿಂಗ್ಸ್ ಶುರು ಮಾಡಲು ಬಯಸಿದ್ದಾರೆ. ಅದರಂತೆ ಮುಂದಿನ ದಿನಗಳಲ್ಲಿ ಒಡಿಶಾ ತಂಡವನ್ನು ಪ್ರತಿನಿಧಿಸುವುದಾಗಿ ಹೇಳಿಕೊಂಡಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಪರ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ ಅಂಶುಮಾನ್ ರಾತ್. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಎನಿಸಿಕೊಂಡಿರುವ ಅಂಶುಮಾನ್ ಬೌಲಿಂಗ್ ಮಾಡುವಲ್ಲಿ ಕೂಡ ಸಮರ್ಥರು ಎಂಬುದು ಇನ್ನೊಂದು ವಿಶೇಷ.
5 / 7
ಏಕೆಂದರೆ ಹಾಂಕಾಂಗ್ ಪರ ಆರಂಭಿಕ ಬ್ಯಾಟ್ಸ್ಮನ್, ವಿಕೆಟ್ ಕೀಪರ್ ಹಾಗೂ ಬೌಲರ್ ಜವಾಬ್ದಾರಿಯನ್ನು ಅಂಶುಮಾನ್ ನಿರ್ವಹಿಸಿದ್ದರು. ಅದರಂತೆ ರಾತ್ ಹೆಸರಿನಲ್ಲಿ ಒಟ್ಟು 19 ಅಂತಾರಾಷ್ಟ್ರೀಯ ವಿಕೆಟ್ಗಳಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಒಡಿಶಾ ಪರ ಆಲ್ರೌಂಡರ್ ಆಗಿ 23 ರ ಹರೆಯದ ಅಂಶುಮಾನ್ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.
6 / 7
ಇನ್ನು ಅಂಶುಮಾನ್ ಕೊನೆಯ ಬಾರಿ ಹಾಂಕಾಂಗ್ ತಂಡವನ್ನು ಪ್ರತಿನಿಧಿಸಿದ್ದು 2018 ರಲ್ಲಿ. ಇದೀಗ ಮೂರು ವರ್ಷಗಳು ಕಳೆದಿವೆ. ಹೀಗಾಗಿ ಹೊಸ ದೇಶದ ತಂಡದ ಭಾಗವಾಗಲು NOC ಮತ್ತು ಇತರ ಅಗತ್ಯ ವಿಷಯಗಳನ್ನು ಪೂರ್ಣಗೊಳಿಸಿದ್ದಾರೆ.
7 / 7
ಪ್ರಸ್ತುತ ಒಡಿಶಾ ತಂಡದ ಕೋಚ್ ದೇಶೀಯ ಅಂಗಳದ ಸಚಿನ್ ಖ್ಯಾತಿಯ ವಾಸಿಂ ಜಾಫರ್ ಎಂಬುದು ವಿಶೇಷ. ಇದೀಗ 23ರ ಹರೆಯದ ಸ್ಟಾರ್ ಆಟಗಾರನೇ ಒಡಿಶಾ ತಂಡಕ್ಕೆ ಎಂಟ್ರಿ ಕೊಡುತ್ತಿರುವುದು ತಂಡ ಬಲ ಹೆಚ್ಚಿಸಿದೆ ಎಂದು ಹೇಳಬಹುದು.
Published On - 3:03 pm, Mon, 30 August 21