144 ವರ್ಷಗಳಿಗೊಮ್ಮೆ ಬರುವ ಪ್ರಯಾಗರಾಜ್ ಮಹಾಕುಂಭ ದೇಶ ವಿದೇಶಗಳಿಂದ ಲೆಕ್ಕವಿಲ್ಲದಷ್ಟು ಜನರನ್ನು ಸೆಳೆಯುತ್ತದೆ. ಲಕ್ಷಾಂತರ ಸಂಖ್ಯೆಯಲ್ಲಿ ಸಾಧು ಸಂತರು ಪ್ರಯಾಗ್ರಾಜ್ನಲ್ಲಿ ಗಂಗೆಯಲ್ಲಿ ಮಿಂದೆದ್ದು ಪುನೀತರಾಗುತ್ತಾರೆ. ದೇಶದ ಎರಡನೇ ಅತಿದೊಡ್ಡ ಉದ್ಯಮಿ ಗೌತಮ್ ಅದಾನಿ ತಮ್ಮ ಕುಟುಂಬ ಸಮೇತರಾಗಿ ಮಹಾಕುಂಭದಲ್ಲಿ ಪಾಲ್ಗೊಂಡರು.
ಗೌತಮ್ ಅದಾನಿ ತಮ್ಮ ಕುಟುಂಬದೊಂದಿಗೆ ಪ್ರಯಾಗ್ರಾಜ್ನ ತ್ರಿವೇಣಿ ಸಂಗಮ್ನಲ್ಲಿ ಪೂಜೆ ಸಲ್ಲಿಸಿದರು. ಪತ್ನಿ, ಮಗ, ಸೊಸೆ ಮೊದಲಾದ ಅವರ ಕುಟುಂಬ ಸದಸ್ಯರೂ ಜೊತೆಗಿದ್ದು ಪ್ರಾರ್ಥನೆ ಸಲ್ಲಿಸಿದರು. ಕುಟುಂಬ ಸದಸ್ಯರು ವಿವಿಧ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದು ವಿಶೇಷ.
ಇವತ್ತು ಪ್ರಯಾಗರಾಜ್ನ ಪುಣ್ಯ ಭೂಮಿಯನ್ನು ಸ್ಪರ್ಶಿಸಿ ಪಾವನನಾಗಿದ್ದೇನೆ. ಬಹಳ ಅದ್ಭುತ ಅನುಭವ ಇದು. ಈ ಅನುಭವ ಪದಗಳಲ್ಲಿ ವರ್ಣಿಸಲಸದಳ ಎಂದು ಹೇಳಿದ ಅವರು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಈ ಮಹಾಕುಂಭವನ್ನು ಸಮರ್ಪಕವಾಗಿ ಆಯೋಜಿಸಿದ್ದಕ್ಕೆ ಧನ್ಯವಾದ ಹೇಳಿದರು. ಗಂಗಾ ಮಾತೆಯ ಆಶೀರ್ವಾದಕ್ಕಿಂತ ಮಿಗಿಲಾದುದು ಇನ್ನೋಂದಿಲ್ಲ ಎಂದರು.
ಮಹಾಕುಂಭ ಆಯೋಜನೆ ಮಾಡಿದ ಆಡಳಿತವರ್ಗ, ಪೊಲೀಸ್, ಸ್ವಚ್ಛತಾ ವಿಭಾಗ ಇವರಿಗೂ ಧನ್ಯವಾದ ಹೇಳುತ್ತೇನೆ. ಕಾರ್ಪೊರೇಟ್ ಸಂಸ್ಥೆಗಳಿಗೆ ಇದು ಒಂದು ಕೇಸ್ ಸ್ಟಡಿಯಾಗಿದೆ ಎಂದು ಗೌತಮ್ ಅದಾನಿ ಈ ಸಂದರ್ಭದಲ್ಲಿ ಹೇಳಿದರು.
ಯುಪಿಯಲ್ಲಿ ದೊಡ್ಡ ಅವಕಾಶಗಳಿವೆ. ಇಲ್ಲಿನ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ. ಅದಾನಿ ಗ್ರೂಪ್ನಿಂದ ಈ ರಾಜ್ಯಕ್ಕೆ ಕೊಡುಗೆ ಇದೆ. ಯುಪಿಯಲ್ಲಿ ಹೂಡಿಕೆ ಮಾಡಲು ತಮ್ಮ ಸಂಸ್ಥೆ ಬದ್ಧವಾಗಿದೆ ಎಂದು ಅದಾನಿ ತಿಳಿಸಿದರು.