- Kannada News Photo gallery Google lags behind in AI race, ex CEO Eric Schmidt finds work from home as reason, read in Kannada
ಗೂಗಲ್ಗೆ ತಟ್ಟಿದೆಯಾ ವರ್ಕ್ ಫ್ರಂ ಹೋಮ್ ಶಾಪ?; ಮಾಜಿ ಸಿಇಒ ಶಾಕಿಂಗ್ ಹೇಳಿಕೆ
Ex Google CEO Eric Schmidt speaks: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಗೂಗಲ್ ಅನ್ನು ಓಪನ್ಎಐ ಮೊದಲಾದ ಕಂಪನಿಗಳು ಓವರ್ಟೇಕ್ ಮಾಡಿವೆ. ಗೂಗಲ್ ಈ ಟೆಕ್ನಾಲಜಿಯ ಪೈಪೋಟಿಯಲ್ಲಿ ಹಿಂದುಳಿಯಲು ವರ್ಕ್ ಫ್ರಂ ಹೋಮ್ನಂತಹ ಸಡಿಲ ಕೆಲಸದ ನೀತಿಯೇ ಕಾರಣ ಎಂದು ಮಾಜಿ ಸಿಇಒ ಎರಿಕ್ ಶ್ಮಿಟ್ ಹೇಳಿದ್ದಾರೆ. ಈ ಬಗ್ಗೆ ಒಂದು ವರದಿ.
Updated on: Aug 15, 2024 | 8:03 PM

ವರ್ಕ್ ಫ್ರಂ ಹೋಮ್ ವಿಚಾರದಲ್ಲಿ ಉದ್ಯಮ ವಲಯದ ಅಭಿಪ್ರಾಯ ಇಬ್ಭಾಗವಾಗಿದೆ. ಕೆಲಸ ಮತ್ತು ಜೀವನ ಎರಡನ್ನೂ ತೂಗಿಸಿಕೊಂಡು ಹೋಗಬೇಕು. ಉದ್ಯೋಗಿಗಳು ವರ್ಕ್ ಫ್ರಂ ಹೋಮ್ ಮಾಡಿದರೆ ಹೆಚ್ಚು ಉತ್ಪನ್ನಶೀಲತೆ ಸಾಧಿಸಬಹುದು ಎನ್ನುವ ಅನಿಸಿಕೆ ಕೆಲವರದು. ಆದರೆ, ಉದ್ಯಮ ವಲಯದಲ್ಲಿ ಹೆಚ್ಚಿನ ಎಕ್ಸಿಕ್ಯೂಟಿವ್ಗಳು ವರ್ಕ್ ಫ್ರಂ ಹೋಮ್ ಅನ್ನು ತೀವ್ರವಾಗಿ ವಿರೋಧಿಸುತ್ತಾರೆ. ಉದ್ಯೋಗಿಗಳ ಕಾರ್ಯಕ್ಷಮತೆ ಮತ್ತು ಕಂಪನಿಯ ಗುರಿಸಾಧನೆ ಕಷ್ಟವಾಗುತ್ತದೆ ಎನ್ನುವ ಅಭಿಪ್ರಾಯ ಅವರದ್ದು.

ವರ್ಕ್ ಫ್ರಂ ಹೋಂ ಬಗ್ಗೆ ಮೊದಲಿಂದಲೂ ಅಸಮಾಧಾನ ಹೊಂದಿರುವ ಗೂಗಲ್ನ ಮಾಜಿ ಸಿಇಒ ಎರಿಕ್ ಶ್ಮಿಟ್ ಅವರು ಶಾಕಿಂಗ್ ವಿಚಾರವೊಂದನ್ನು ಹೇಳಿದ್ದಾರೆ. ಎಐ ತಂತ್ರಜ್ಞಾನ ಆವಿಷ್ಕರಣೆಯಲ್ಲಿ ಗೂಗಲ್ ತನ್ನ ಪ್ರತಿಸ್ಪರ್ಧಿಗಳಿಗಿಂತ ಹಿಂದುಳಿಯಲು ಆ ಸಂಸ್ಥೆಯ ಸುಲಭ ಕೆಲಸ ನೀತಿಗಳೇ ಕಾರಣ ಎಂದಿದ್ದಾರೆ.

ಗೂಗಲ್ ಸಂಸ್ಥೆಯಲ್ಲಿ ಉದ್ಯೋಗಿಗಳಿಗೆ ಕೆಲಸ ಮಾಡಲು ಸುಲಭ ವಾತಾವರಣ ಇದೆ. ಉದ್ಯೋಗಿಗಳ ಹಿತಾಸಕ್ತಿಗೆ ಪೂರಕವಾದ ವಾತಾವರಣವನ್ನು ಮ್ಯಾನೇಜ್ಮೆಂಟ್ ಕಲ್ಪಿಸಿದೆ. ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಆಯ್ಕೆಯೂ ಇದೆ. ಈಗ ಹೆಚ್ಚಿನ ಕಾರ್ಪೊರೇಟ್ ಸಂಸ್ಥೆಗಳು ವರ್ಕ್ ಫ್ರಂ ಹೋಮ್ ಅನ್ನು ರದ್ದುಗೊಳಿಸಿ ಕಚೇರಿಗೆ ಬಂದು ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಕಟ್ಟಪ್ಪಣೆ ಮಾಡುತ್ತಿವೆ. ಗೂಗಲ್ ಇನ್ನೂ ಕೂಡ ತನ್ನ ಉದ್ಯೋಗಿಗಳಿಗೆ ವರ್ಕ್ ಫ್ರಂ ಅವಕಾಶ ಮುಂದುವರಿಸಿದೆ.

ಅಮೆರಿಕದ ಸ್ಟಾನ್ಫೋರ್ಡ್ ಯೂನಿವರ್ಸಿಟಿಯ ಲೆಕ್ಚರ್ವೊಂದರಲ್ಲಿ ಮಾತನಾಡುತ್ತಿದ್ದ ಗೂಗಲ್ನ ಮಾಜಿ ಸಿಇಒ ಎರಿಕ್ ಶ್ಮಿಟ್, ಗೂಗಲ್ಗೆ ಅದರ ವರ್ಕ್ ಫ್ರಂ ನೀತಿಯೇ ಮುಳುವಾಗಿದೆ. ಎಐ ಅಭಿವೃದ್ಧಿಯಲ್ಲಿ ಓಪನ್ಎಐ, ಆಂಥ್ರೋಪಿಕ್ ಮೊದಲಾದ ಪ್ರತಿಸ್ಪರ್ಧಿ ಕಂಪನಿಗಳು ಗೂಗಲ್ ಅನ್ನು ಓವರ್ಟೇಕ್ ಮಾಡಲು ಇದೇ ಕಾರಣ. ಗೂಗಲ್ ತನ್ನ ಉದ್ಯೋಗಿಗಳಿಗೆ ಆರಾಮದ ವಾತಾವರಣ ಕಲ್ಪಿಸಿರುವುದರಿಂದ ಹೊಸ ಆವಿಷ್ಕಾರದ ಸಾಮರ್ಥ್ಯ ಕಡಿಮೆ ಆಯಿತು. ಅದರ ಪ್ರತಿಸ್ಪರ್ಧಿ ಕಂಪನಿಗಳು ತಮ್ಮ ಉದ್ಯೋಗಿಗಳಿಂದ ಚೆನ್ನಾಗಿ ದುಡಿಸಿಕೊಳ್ಳುತ್ತಿವೆ ಎಂದು ಶ್ಮಿಟ್ ಹೇಳಿದ್ದಾರೆ.

ಗೂಗಲ್ ಸಂಸ್ಥೆ ಈಗಲೂ ಕೂಡ ಉದ್ಯೋಗಿಗಳಿಗೆ ವಾರಕ್ಕೆ ಎರಡು ದಿನ ವರ್ಕ್ ಫ್ರಂ ಹೋಮ್ ಅವಕಾಶ ಕೊಡುವ ನೀತಿ ಹೊಂದಿದೆ. ಉದ್ಯೋಗಿಗಳು ಮನೆಯಿಂದ ಕೆಲಸ ಮಾಡಿದರೆ ಕೆಲಸದಲ್ಲಿ ನಿರಂತರವಾಗಿ ಸಹಕಾರ ಮತ್ತು ಹೊಸತನವನ್ನು ಕಂಡುಕೊಳ್ಳುವುದು ಕಷ್ಟವಾಗುತ್ತದೆ. ಟೆಕ್ ವಲಯದಲ್ಲಿ ಇರುವ ಪೈಪೋಟಿಯಲ್ಲಿ ಮುಂದುವರಿಯುವುದು ಕಷ್ಟವಾಗುತ್ತದೆ ಎಂಬುದು ಎರಿಕ್ ಶ್ಮಿಟ್ ಅನಿಸಿಕೆ.



















