D Gukesh: ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದ ಗುಕೇಶ್‌ಗೆ ತೆರಿಗೆ ವಿನಾಯಿತಿ?
D Gukesh: ಭಾರತದ ಯುವ ಚೆಸ್ ಪ್ರತಿಭೆ ಡಿ. ಗುಕೇಶ್ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ. ಅವರಿಗೆ 11.45 ಕೋಟಿ ರೂಪಾಯಿ ಬಹುಮಾನ ದೊರೆತಿದೆ. ತೆರಿಗೆ ನಿಯಮಗಳ ಪ್ರಕಾರ, ಅವರು ಭಾರೀ ಮೊತ್ತದ ತೆರಿಗೆ ಪಾವತಿಸಬೇಕಾಗಿತ್ತು. ಆದರೆ, ಮೋದಿ ಸರ್ಕಾರ ಅವರಿಗೆ ತೆರಿಗೆ ವಿನಾಯಿತಿ ನೀಡುವ ಬಗ್ಗೆ ಪರಿಶೀಲಿಸುತ್ತಿದೆ ಎಂಬ ವರದಿಗಳಿವೆ. ಇದರಿಂದ ಅವರು ಸಂಪೂರ್ಣ ಬಹುಮಾನವನ್ನು ಪಡೆಯುವ ಸಾಧ್ಯತೆ ಇದೆ.
1 / 6
ಭಾರತದ ಯುವ ಚೆಸ್ ಆಟಗಾರ ಡಿ ಗುಕೇಶ್ ಕೆಲವು ದಿನಗಳ ಹಿಂದೆ ಸಿಂಗಾಪುರದಲ್ಲಿ ನಡೆದಿದ್ದ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಫೈನಲ್ನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ವಿಶ್ವ ಚೆಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. ಇದರ ಜೊತೆಗೆ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಚೆಸ್ ವಿಶ್ವ ಚಾಂಪಿಯನ್ ಎಂಬ ದಾಖಲೆಯನ್ನು ನಿರ್ಮಿಸಿದ್ದರು.
2 / 6
ಈ ಅದ್ಭುತ ಗೆಲುವಿನ ನಂತರ ಗುಕೇಶ್‌ಗೆ ಆಯೋಜಕರಿಂದ ಬರೋಬ್ಬರಿ 11.45 ಕೋಟಿ ಬಹುಮಾನ ಸಿಕ್ಕಿತ್ತು. ಇದರ ಜೊತೆಗೆ ಹೆಚ್ಚುವರಿಯಾಗಿ, ತಮಿಳುನಾಡು ಸರ್ಕಾರವು ಅವರಿಗೆ 5 ಕೋಟಿ ರೂಪಾಯಿಗಳ ಬಹುಮಾನದ ಮೊತ್ತವನ್ನು ಘೋಷಿಸಿತ್ತು. ಹೀಗಾಗಿ ಗುಕೇಶ್‌ಗೆ ಒಟ್ಟು 16.45 ಕೋಟಿ ರೂ. ಬಹುಮಾನ ಲಭಿಸಿತ್ತು.
3 / 6
ಆದರೆ ಭಾರತೀಯ ತೆರಿಗೆ ನಿಯಮಗಳ ಪ್ರಕಾರ, ಗುಕೇಶ್ ತಾವು ಪಡೆದ ಬಹುಮಾನದ ಮೊತ್ತದ ಶೇ. 42.5 ಪ್ರತಿಶತ ಹಣವನ್ನು ತೆರಿಗೆಯಾಗಿ ಪಾವತಿಸಬೇಕಿತ್ತು. ಅಂದರೆ ಗುಕೇಶ್ ತಾವು ಪಡೆದ 16.45 ಕೋಟಿ ರೂ. ಬಹುಮಾನದಲ್ಲಿ ಸರಿಸುಮಾರು 6.23 ಕೋಟಿ ರೂಗಳನ್ನು ತೆರಿಗೆಯಾಗಿ ಪಾವತಿಸಬೇಕಾಗಿತ್ತು.
4 / 6
ಆದರೀಗ ಮೋದಿ ಸರ್ಕಾರದ ಹಣಕಾಸು ಸಚಿವಾಲಯ ಗುಕೇಶ್ ಅವರ ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರ ಬಹುಮಾನದ ಮೇಲೆ ತೆರಿಗೆ ವಿನಾಯಿತಿ ಘೋಷಿಸಲು ಚಿಂತಿಸಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಈ ನಿರ್ಧಾರವನ್ನು ಶೀಘ್ರದಲ್ಲೇ ಅಧಿಕೃತವಾಗಿ ಹೊರಡಿಸಲಾಗುವುದು. ಇದರಿಂದಾಗಿ ಗುಕೇಶ್ ಸಂಪೂರ್ಣ ಬಹುಮಾನದ ಹಣವನ್ನು ಪಡೆಯಲಿದ್ದಾರೆ.
5 / 6
ಚೆಸ್ ಚಾಂಪಿಯನ್‌ಶಿಪ್ ಗೆದ್ದಿದ್ದ ಗುಕೇಶ್ ಅವರು 13 ಲಕ್ಷ ಡಾಲರ್ ಬಹುಮಾನ ಪಡೆದಿದ್ದರು. ಅಂದರೆ ಭಾರತೀಯ ಕರೆನ್ಸಿಯಲ್ಲಿ 11.45 ಕೋಟಿ ರೂ. ಬಹುಮಾನ ಸಿಕ್ಕಿತ್ತು. ಭಾರತೀಯ ತೆರಿಗೆ ನಿಯಮಗಳ ಪ್ರಕಾರ, ಈ ಮೊತ್ತವು 30 ಪ್ರತಿಶತ ತೆರಿಗೆ, 15 ಪ್ರತಿಶತ ಸರ್ಚಾರ್ಜ್ ಮತ್ತು 4 ಪ್ರತಿಶತ ಸೆಸ್ಗೆ ಒಳಪಟ್ಟಿರುತ್ತದೆ.
6 / 6
ಒಟ್ಟಿನಲ್ಲಿ ಗುಕೇಶ್ 4.09 ಕೋಟಿ ತೆರಿಗೆ ಪಾವತಿಸಬೇಕಿದ್ದು, ಸಿಕ್ಕಿರುವ 11.45 ಕೋಟಿ ರೂ ಬಹುಮಾನದಲ್ಲಿ ತೆರಿಗೆಯನ್ನು ಕಳೆದರೆ ಗುಕೇಶ್‌ಗೆ 7.36 ಕೋಟಿ ರೂ. ಬಹುಮಾನವಾಗಿ ಸಿಗಲಿದೆ. ಇದಲ್ಲದೇ ತಮಿಳುನಾಡು ಸರ್ಕಾರ ನೀಡಿದ 5 ಕೋಟಿಗೂ ತೆರಿಗೆ ವಿಧಿಸಲಾಗಿದ್ದು, ಇದರಿಂದ ಗುಕೇಶ್ 2.86 ಕೋಟಿ ತೆರಿಗೆ ಕಟ್ಟಬೇಕಿದೆ.