- Kannada News Photo gallery Cricket photos IND vs WI Smriti mandhana makes history hits three consecutive fifties against west indies
IND vs WI: ಹ್ಯಾಟ್ರಿಕ್ ಅರ್ಧಶತಕ; ಟಿ20 ಕ್ರಿಕೆಟ್ನಲ್ಲಿ ವಿಶ್ವದಾಖಲೆ ಬರೆದ ಸ್ಮೃತಿ ಮಂಧಾನ
Smriti Mandhana: ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲೂ ಟೀಂ ಇಂಡಿಯಾದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಅಮೋಘ ಅರ್ಧಶತಕ ಸಿಡಿಸಿದ್ದಾರೆ. ವಿಂಡೀಸ್ ವಿರುದ್ಧದ ಈ ಸರಣಿಯಲ್ಲಿ ಸ್ಮೃತಿ ಅವರ ಸತತ ಮೂರನೇ ಅರ್ಧಶತಕ ಇದಾಗಿದೆ. ಈ ಮೂಲಕ ಸ್ಮೃತಿ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಬಾರಿಸಿರುವ ಮೊದಲ ಮಹಿಳಾ ಕ್ರಿಕೆಟರ್ ಎಂಬ ವಿಶ್ವದಾಖಲೆಗೆ ಕೊರಳೊಡ್ಡಿದ್ದಾರೆ.
Updated on: Dec 19, 2024 | 8:22 PM

ಭಾರತ ಮಹಿಳಾ ತಂಡದ ಅನುಭವಿ ಬ್ಯಾಟ್ಸ್‌ಮನ್ ಸ್ಮೃತಿ ಮಂಧಾನ ಪ್ರಸ್ತುತ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಅಮೋಘ ಅರ್ಧಶತಕ ಸಿಡಿಸಿದ್ದಾರೆ. ಇದು ಈ ಸರಣಿಯಲ್ಲಿ ಸ್ಮೃತಿ ಅವರ ಸತತ ಮೂರನೇ ಅರ್ಧಶತಕವಾಗಿದೆ.

ವಿಂಡೀಸ್ ವಿರುದ್ಧ ಅರ್ಧಶತಕಗಳ ಹ್ಯಾಟ್ರಿಕ್ ಸಾಧನೆ ಮಾಡಿರುವ ಸ್ಮೃತಿ ಇದೀಗ ಮಿಥಾಲಿ ರಾಜ್ ನಂತರ ಸತತ 3 ಅರ್ಧಶತಕಗಳನ್ನು ಗಳಿಸಿದ ಎರಡನೇ ಭಾರತೀಯ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅಲ್ಲದೇ ಈ ಅರ್ಧಶತಕದೊಂದಿಗೆ ಸ್ಮೃತಿ ವಿಶ್ವದಾಖಲೆಯನ್ನು ಮುರಿದಿದ್ದಾರೆ.

ವಾಸ್ತವವಾಗಿ ವಿಂಡೀಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ಸ್ಮೃತಿ ಅರ್ಧಶತಕ ಬಾರಿಸಿದ್ದರು. ಇದು ಸ್ಮೃತಿ ಅವರ ವೃತ್ತಿ ಜೀವನದಲ್ಲಿ 29ನೇ ಅರ್ಧಶತಕವಾಗಿತ್ತು. ಈ ಮೂಲಕ ಸ್ಮೃತಿ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಗಳಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ನ್ಯೂಜಿಲೆಂಡ್‌ನ ಆಲ್‌ರೌಂಡರ್ ಸುಜಿ ಬೇಟ್ಸ್ ಅವರ ಅರ್ಧಶತಕಗಳ ದಾಖಲೆಯನ್ನು ಸರಿಗಟ್ಟಿದ್ದರು.

ಇದೀಗ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಟಿ20 ಪಂದ್ಯದಲ್ಲಿ ಕೇವಲ 27 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ ಸ್ಮೃತಿಗೆ ಇದು ಅವರ 30ನೇ ಟಿ20 ಅರ್ಧಶತಕವಾಗಿದೆ. ಈ ಮೂಲಕ ಸ್ಮೃತಿ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ಅರ್ಧಶತಕಗಳನ್ನು ಬಾರಿಸಿರುವ ಮೊದಲ ಮಹಿಳಾ ಕ್ರಿಕೆಟರ್ ಎಂಬ ವಿಶ್ವದಾಖಲೆಗೆ ಕೊರಳೊಡ್ಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಹ್ಯಾಟ್ರಿಕ್ ಅರ್ಧಶತಕ ಸಿಡಿಸಿದಲ್ಲದೆ ಸ್ಮೃತಿ ಸತತ 7 ಎಸೆತಗಳಲ್ಲಿ 7 ಬೌಂಡರಿಗಳನ್ನು ಸಹ ಹೊಡೆದರು. ಭಾರತದ ಇನ್ನಿಂಗ್ಸ್ನ ಮೂರು ಮತ್ತು ನಾಲ್ಕನೇ ಓವರ್‌ಗಳಲ್ಲಿ ಸತತ 7 ಬೌಂಡರಿ ಹೊಡೆಯುವ ಮೂಲಕ ಸ್ಮೃತಿ ಈ ಸಾಧನೆ ಮಾಡಿದರು.

ತಮ್ಮ ಅರ್ಧಶತಕದ ಇನ್ನಿಂಗ್ಸ್ನಲ್ಲಿ ಇದುವರೆಗೆ 12 ಬೌಂಡರಿ ಹಾಗೂ 1 ಸಿಕ್ಸರ್ ಸಹ ಸಿಡಿಸಿದ್ದಾರೆ. ಈ 12 ಬೌಂಡರಿಗಳೊಂದಿಗೆ ಇದೀಗ ಸ್ಮೃತಿ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 500 ಬೌಂಡರಿಗಳನ್ನು ಸಹ ಪೂರೈಸಿದ್ದಾರೆ.



















