
ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಯ ಗಡಿ ಭಾಗದಲ್ಲಿರುವ ಕೊಡಚಾದ್ರಿ ಯಾರು ಕೇಳಿಲ್ಲ, ಯಾರಿಗೆ ಇಷ್ಟ ಇಲ್ಲ ಹೇಳಿ? ಚಾರಣಪ್ರಿಯರಿಗೆ, ಕೊಲ್ಲೂರು ಶ್ರೀ ಮೂಕಾಂಬಿಕೆಯ ಭಕ್ತರಿಗೆ ಇಷ್ಟವಾಗುವ ಸ್ಥಳ ಸದ್ಯ ಪಕ್ಷಿ ಪ್ರಿಯರಿಗೂ ಇಷ್ಟವಾಗುತ್ತಿದೆ. ಇಲ್ಲಿರುವ 300 ಬಗೆಯ ವಿವಿಧ ಪ್ರಭೇದ ಪಕ್ಷಿಗಳ ವೀಕ್ಷಣೆಗಾಗಿ ಈ ಬಾರಿ ಮೂರು ದಿನಗಳ ಕಾಲ ಹಕ್ಕಿ ಹಬ್ಬ (Karnataka Bird Festival) ಇದೇ ಭಾಗದಲ್ಲಿ ನಡೆಯುತ್ತಿದೆ. (ವರದಿ: ದಿನೇಶ್ ಯಲ್ಲಾಪುರ್, ಟಿವಿ9, ಉಡುಪಿ)

ಹೌದು, ಉಡುಪಿ ಜಿಲ್ಲೆಗೆ ಭೇಟಿ ನೀಡುವ ಬಹುತೇಕ ಪ್ರವಾಸಿಗರು ಉಡುಪಿ ಶ್ರೀಕೃಷ್ಣ ಮಠ, ಮಲ್ಪೆ ಬೀಚ್ ಬಿಟ್ಟರೆ ಅತೀ ಹೆಚ್ಚು ಸಂದರ್ಶಿಸುವ ಸ್ಥಳ ಕೊಲ್ಲೂರು ಕೊಡಚಾದ್ರಿ. ಪ್ರಕೃತಿ ಸೌಂದರ್ಯದ ರಾಶಿ ಮಧ್ಯೆ ಕುಳಿತ ಆದಿ ಶಂಕರಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಕೊಲ್ಲೂರು ಶ್ರೀ ಮೂಕಾಂಬಿಕೆಯನ್ನು ನೋಡುವುದೆ ಒಂದು ಸೊಗಸು. ಟೆಂಪಲ್ ವಿಸಿಟ್ ಜೊತೆಗೆ ವರ್ಷದಲ್ಲಿ ಲಕ್ಷಾಂತರ ಜನ ಪ್ರವಾಸಿಗರು, ಚಾರಣದ ಮಜ ಅನುಭವಿಸಲು ಇಲ್ಲಿನ ಕೊಡಚಾದ್ರಿಗೆ ಭೇಟಿ ನೀಡುತ್ತಾರೆ. ಸದ್ಯ ಇದೇ ಪ್ರಕೃತಿ ಮತ್ತು ದೇವರ ಸಮಾಗಮವಾಗಿರುವ ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಮೂರು ದಿನಗಳ ಹಕ್ಕಿ ಹಬ್ಬ ಆಯೋಜನೆಯಾಗಿದೆ. ದೇಶ ವಿದೇಶದಿಂದ ಹಕ್ಕಿಗಳ ವೀಕ್ಷಣೆಗೆ ಸದ್ಯ ಕೊಲ್ಲೂರುಗೆ ಆಗಮಿಸುತ್ತಿದ್ದು, ನಿನ್ನೆ ಶುಕ್ರವಾರ ಕೊಲ್ಲೂರು ಸಮೀಪದ ಹಾಲ್ಕಲ್ ಬಳಿ ಈ ವಿನೂತನ ಹಕ್ಕಿ ಹಬ್ಬ ಉದ್ಘಾಟನೆ ನಡೆಯಿತು

ಕೊಲ್ಲೂರು ಅಭಯಾರಣ್ಯ ಸೇರಿದಂತೆ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿರುವ ಹಲವು ಬಗೆಯ ಅಪರೂಪದ ಹಕ್ಕಿಗಳ ಬಗ್ಗೆ ಹಕ್ಕಿ ಹಬ್ಬದ ಮೂಲಕ ನಾಡಿಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಕೋ ಟೂರಿಸಂ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಹಲವು ಭಾಗಗಳಲ್ಲಿ ಹಕ್ಕಿ ಹಬ್ಬ ಆಯೋಜಿಸಲಾಗುತ್ತಿದೆ. ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ವಲಸೆ ಮತ್ತು ಸ್ಥಳೀಯ ಸುಮಾರು 300 ಕ್ಕೂ ಹೆಚ್ಚು ಹಕ್ಕಿಗಳಿದೆ.

ಈ ಬಗ್ಗೆ ಸಾರ್ವಜನಿಕ ರಿಗೆ ಅರಿವು ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಮುದಾಯದ ಬೆಂಬಲವಿಲ್ಲದೆ ಪಕ್ಷಿಗಳ ರಕ್ಷಣೆ ಸಾಧ್ಯವಿಲ್ಲ ಎನ್ನುವುದನ್ನು ಮನಗಂಡ ಇಲಾಖೆ, ಸಮುದಾಯದ ಜೊತೆಗೂಡಿ ಕಾರ್ಯಕ್ರಮ ವಿಶೇಷವಾಗಿ ರೂಪಿಸಿದೆ. ಈ ಬಾರಿಯ ಹಕ್ಕಿಹಬ್ಬ ದಲ್ಲಿ ಮಲಬಾರ್ ಟ್ರೋಗನ್ (Malabar Trogon) ರಾಯಭಾರಿ ಹಕ್ಕಿಯನ್ನಾಗಿ ಆಯ್ಕೆ ಮಾಡಲಾಗಿದ್ದು, ಕಾಡಿನ ಮಧ್ಯೆ ಹಕ್ಕಿಗಳ ಚಲನವಲನ ಗಮನಿಸಿ ಆಸಕ್ತಿಗೆ ಬರ್ಡ್ ವಾಚ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕರ್ನಾಟಕ ಇಕೋ ಟೂರಿಸಂ ಬೋರ್ಡ್ ಅಧ್ಯಕ್ಷರಾದ ಮದನ್ ಗೋಪಾಲ್ ತಿಳಿಸಿದ್ದಾರೆ.

ಒಟ್ಟಾರೆಯಾಗಿ ಹಕ್ಕಿ ಹಬ್ಬದ ನೆಪದಲ್ಲಿ ರಾಷ್ಟ್ರೀಯ ಮಟ್ಟದ ವನ್ಯ ಜೀವಿ ಛಾಯಾಗ್ರಾಹಕರು ಕೊಲ್ಲೂರಿಗೆ ಬೇಟಿ ನೀಡುತ್ತಿದ್ದಾರೆ. ಸದ್ಯ ಪಕ್ಷಿ ಪ್ರೇಮಿಗಳಿಗೆ ಅಪರೂಪದ ಪಕ್ಷಿಗಳನ್ನು ವೀಕ್ಷಿಸಿ ಆನಂದಿಸುವ ಸದಾವಕಾಶವನ್ನು ಈ ಮೂಲಕ ಇಲಾಖೆ ಕಲ್ಪಿಸಿದೆ ಎಂದರೆ ತಪ್ಪಾಗಲಾರದು.