
ಹಿಂಗಾರಿ ಬೆಳೆಗಳ ಕಟಾವು ಮಾಡಿ ಆ ಬೆಳೆಯನ್ನ ಬಳಕೆ ಮಾಡದೇ ದೇವರಿಗೆ ಅರ್ಪಣೆ, ವಿಶೇಷ ನೇವೈದ್ಯ ಮೂಲಕ ವಿಶಿಷ್ಟ ಆಚರಣೆ. ಮೆಂಡೆಗಾರ ಮನೆಯಲ್ಲಿ ಅಡುಗೆ ತಯಾರಿ ಈ ಊರಲ್ಲಿ ಮಣ್ಣಿನ ಮಡಿಕೆಯಲ್ಲಿನ ಅಂಬಲಿಯದ್ದೇ ವಿಶೇಷ, ಇಂತಹದ್ದೊಂದು ವಿಶೇಷತೆ ಕಂಡುಬಂದಿದ್ದು ಗುಮ್ಮಟ ನಗರಿ ವಿಜಯಪುರ ನಗರದ ಹೊರ ಭಾಗದಲ್ಲಿರುವ ರಂಭಾಪೂರ ಗ್ರಾಮದಲ್ಲಿ.

ಶಿವರಾತ್ರಿ ಬಳಿಕ ನಡೆಸಲಾಗುವ ಈ ಅಂಬಲಿ ಹಬ್ಬವನ್ನು ಉತ್ತರ ಕರ್ನಾಟಕದ ವಿಶೇಷವೆಂದೇ ಕರೆಯಬಹುದು. ವರ್ಷದ ಮೊದಲ ಹಬ್ಬ ಇದಾಗಿದ್ದರಿಂದ ಇಲ್ಲಿನ ಮೆಂಡೆಗಾರ ಕುಟುಂಬದ ರೈತರು ತಾವು ಹಿಂಗಾರು ಹಂಗಾಮಿನಲ್ಲಿ ಬೆಳೆದ ಧವಸ, ಧಾನ್ಯಗಳಿಂದ ಮೊದಲು ಊರ ದೇವರು ಆಂಜನೇಯನಿಗೆ ನೈವೇದ್ಯ ಅರ್ಪಿಸುತ್ತಾರೆ.

ಗ್ರಾಮದ ಮೆಂಡೆಗಾರ ಕುಟುಂಬಗಳೆಲ್ಲ ಸೇರಿ ತಾವು ಬೆಳೆದ ವಿವಿಧ ಧವಸ ಧಾನ್ಯಗಳ ಬೆಳೆಗಳಿಂದ ಮನೆಯಲ್ಲಿ ತರಹೇವಾರಿ ಅಡುಗೆ ತಯಾರಿಸುತ್ತಾರೆ. ಉತ್ತರ ಕರ್ನಾಟಕದ ಸ್ಪೇಷಲ್ ಎಂದೇ ಹೇಳಲಾಗುವ ಜೋಳದ ಅಂಬಲಿ, ಖಡಕ್ ರೊಟ್ಟಿ, ಶೇಂಗಾ ಚಟ್ನಿ, ಸಜ್ಜಕ(ಪಾಯಸ), ಬದನೇಕಾಯಿ ಪಲ್ಯೆ, ಕಾಳುಗಳ ಪಲ್ಯೆ ಸೇರಿದಂತೆ ನಾನಾ ಥರಹದ ಅಡುಗೆಯನ್ನು ಮಣ್ಣಿನ ಗಡಿಗೆಯಲ್ಲೇ ತಯಾರಿಸಿ ಹನುಮಾನ ದೇವರಿಗೆ ಅರ್ಪಿಸುತ್ತಾರೆ. ಬಳಿಕ ಅದೇ ದೇವಸ್ಥಾನದ ಆವರಣದಲ್ಲಿ ಇಡಿ ಊರಿನ ಜನರಗೆಲ್ಲ ಊಟಕ್ಕೆ ಬಡಿಸಿ, ತಾವೂ ಊಟದ ರುಚಿ ಸವಿಯುತ್ತಾರೆ.

ಮೆಂಡೆಗಾರ ಕುಟುಂಬದಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆಯಲಾಗುವ ಯಾವುದೇ ಧವಸ ಧಾನ್ಯವನ್ನು ಮೊದಲು ಇಲ್ಲಿಗೆ ತಂದು ನೈವ್ಯೇದ್ಯ ಮಾಡಲಾಗುತ್ತದೆ. ಊರಿಗೆ ಊಟ ಹಾಕಿದ ಬಳಿಕವೇ ಆ ಧಾನ್ಯಗಳನ್ನು ಮಾರಾಟ ಮಾಡುವ ಪದ್ದತಿ ಇಲ್ಲಿ ನಡೆದುಕೊಂಡು ಬಂದಿದೆ.

ವರ್ಷಕ್ಕೊಮ್ಮೆ ಬರುವ ಆಚರಣೆಯ ಇನ್ನೊಂದು ವಿಶೇಷವೆಂದರೆ ಹೊಸದಾಗಿ ಖರೀದಿಸಿದ ಮಣ್ಣಿನ ಮಡಿಕೆಯಲ್ಲೇ ಮಜ್ಜಿಗೆ ಹುಳಿ ಹಾಕಿ ಜೋಳದಿಂದ ಅಂಬಲಿಯನ್ನು ತಯಾರಿಸಲಾಗುತ್ತದೆ. ಇಲ್ಲಿ ತಯಾರಿಸುವ ಅಂಬಲಿ, ಬೇಸಿಗೆಯಲ್ಲಿ ತಂಪನ್ನು ನೀಡುವ ಜೋಳದ ಅಂಬಲಿಯನ್ನು ಹುಳಿ ಹಾಕಿ ಮಣ್ಣಿನ ಮಡಿಕೆಯಲ್ಲಿ ತಯಾರಿಸಿ ತರುತ್ತಾರೆ. ಊಟದ ವೇಳೆಯಲ್ಲಿ ಪ್ರತಿಯೊಬ್ಬರಿಗೂ ಈ ಅಂಬಲಿಯನ್ನು ಕುಡಿಯಲು ನೀಡಲಾಗುತ್ತದೆ.

ಇನ್ನು ಈ ಅಂಬಲಿ ಜಾತ್ರೆಗೆಂದು ತವರು ಮನೆಗೆ ಬರುವ ಮೆಂಡೆಗಾರ ಕುಟುಂಬದ ಮಹಿಳೆಯರಲ್ಲ ಸೇರಿ ತಯಾರಿಸಿದ ಅಡುಗೆಯನ್ನು ಮಡಿಕೆಗಳಲ್ಲಿ ತಲೆಯಮೇಲೆ ಹೊತ್ತು ಊರ ತುಂಬ ಬರುವುದನ್ನು ನೋಡಿದರೆ ಆಧುನಿಕ ಕಾಲದಲ್ಲೂ ಹಿಂದಿನ ಸಂಪ್ರದಾಯವನ್ನು ಪಾಲನೆ ಮಾಡಿಕೊಂಡು ಬರುವುದು ಕಂಡು ಬರುತ್ತದೆ.

ರಂಭಾಪುರ ಗ್ರಾಮದ ಹನುಮಾನ ದೇವರ ಮಹಿಮೆ ಅಪಾರವಾಗಿದ್ದು, ಇಲ್ಲಿಗೆ ತರುವ ಅಡುಗೆಯನ್ನು ಗ್ರಾಮದ ಹನುಮಾನ ದೇವರಿಗೆ ಮೊಟ್ಟ ಮೊದಲು ಅರ್ಪಣೆ ಮಾಡುತ್ತಾರೆ. ಬಳಿಕ ಎಲ್ಲ ಜನರು ಸಾಮೂಹಿಕ ಭೋಜನ ಮಾಡುತ್ತಾರೆ. ಎಷ್ಟು ಜನರು ಊಟಕ್ಕೆ ಬಂದರೂ ಸಹ ಯಾವತ್ತೂ ಊಟ ಕಡಿಮೆ ಬಿದ್ದಿಲ್ಲ ಎಂಬುದು ಇಲ್ಲಿನ ಮತ್ತೊಂದು ವೈಶಿಷ್ಟ್ಯವಾಗಿದೆ.

ಸಾಮೂಹಿಕ ಭೋಜನದ ಬಳಿಕ ಉಳಿದ ಊಟವನ್ನು ಜನರು ಪ್ರಸಾದದ ರೂಪದಲ್ಲಿ ಅದನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಒಟ್ಟಾರೆ ಮೆಂಡೇಗಾರ ಕುಟುಂಬದಲ್ಲಿ ಹಲವಾರು ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಆಚರಣೆಯನ್ನು ಇಂದಿಗೂ ಉಳಿಸಿಕೊಂಡು ಪಾಲಿಸಿಕೊಂಡು ಹೋಗಲಾಗುತ್ತಿದೆ.