
ಫೈಬರ್ ನಮ್ಮ ದೇಹಕ್ಕೆ ಅತ್ಯಗತ್ಯವಾದ ಅಂಶವಾಗಿದೆ. ಫೈಬರ್ ಅಥವಾ ನಾರಿನಂಶ ತೂಕ ಇಳಿಸಲು ಸಹಕಾರಿಯಾಗಿದೆ, ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ, ಮಲಬದ್ಧತೆಯ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ. ಹಾಗೇ ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ.

ತರಕಾರಿಗಳು, ಹಣ್ಣುಗಳು, ಡ್ರೈಫ್ರೂಟ್ಸ್, ಓಟ್ಸ್ ಮತ್ತು ಬಾರ್ಲಿಯಲ್ಲಿ ನಾರಿನಂಶ ಇರುತ್ತದೆ. ಫೈಬರ್ ಅಂಶ ಕ್ಯಾನ್ಸರ್ನ ಅಪಾಯವನ್ನು ಕೂಡ ಕಡಿಮೆ ಮಾಡುತ್ತದೆ. ತರಕಾರಿಗಳು ನಮ್ಮ ದೇಹಕ್ಕೆ ಅತ್ಯಂತ ಒಳ್ಳೆಯದು. ಆದರೆ, ಕೆಲವು ತರಕಾರಿಗಳಲ್ಲಿ ಮಾತ್ರ ಫೈಬರ್ ಅಂಶ ಹೇರಳವಾಗಿದೆ. ಅಂತಹ ಕೆಲವು ತರಕಾರಿಗಳ ಪಟ್ಟಿ ಇಲ್ಲಿದೆ. ಇದನ್ನು ನಿಮ್ಮ ಅಡುಗೆ, ಸಲಾಡ್ನಲ್ಲಿ ಸೇರಿಸಿಕೊಳ್ಳಲು ಮರೆಯಬೇಡಿ.

ಪಾಲಕ್: ಪಾಲಕ್ ಅನ್ನು ಸಲಾಡ್, ಚಟ್ನಿ, ಸ್ಮೂಥಿ ಹೀಗೆ ಯಾವ ರೂಪದಲ್ಲಿ ಬೇಕಾದರೂ ಸೇವಿಸಬಹುದು. ಪಾಲಕ್ ಸೊಪ್ಪು ಮೂಳೆಯ ಆರೋಗ್ಯ ಮತ್ತು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದರಲ್ಲಿ ವಿಟಮಿನ್ ಸಿ ಮತ್ತು ಬೀಟಾ-ಕ್ಯಾರೋಟಿನ್‌ನಂತಹ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದೆ.

ಬಟಾಣಿ: ಬಟಾಣಿ ನೋಡಲು ಚಿಕ್ಕದಾದರೂ ಅದರ ಕೀರ್ತಿ ದೊಡ್ಡದು. ಪ್ರತಿ ಕಪ್‌ಗೆ 7 ಗ್ರಾಂ ಫೈಬರ್ ಅನ್ನು ಇದು ಹೊಂದಿರುತ್ತದೆ. ದೇಹಕ್ಕೆ ಖನಿಜ ಮತ್ತು ಫೈಬರ್ ಅಂಶವನ್ನು ಬಟಾಣಿ ಒದಗಿಸುತ್ತದೆ.

ಬ್ರೊಕೊಲಿ: ಬ್ರೊಕೊಲಿಯಲ್ಲಿ ಫೈಬರ್ ಅಂಶವಿದ್ದು, ಇದರ ಜೊತೆಗೆ ಆಂಟಿಆಕ್ಸಿಡೆಂಟ್ ವಿಟಮಿನ್‌ಗಳಾದ ಎ ಮತ್ತು ಸಿ, ಖನಿಜ, ಕ್ಯಾಲ್ಸಿಯಂ ಕೂಡ ಅಧಿಕವಾಗಿದೆ.

ಕ್ಯಾರೆಟ್: ಕ್ಯಾರೆಟ್‌ಗಳು ಪ್ರತಿ ಕಪ್‌ಗೆ 3.6 ಗ್ರಾಂ ಫೈಬರ್ ಅನ್ನು ನೀಡುತ್ತವೆ. ಇದು ಹೆಚ್ಚಿನ ಫೈಬರ್ ಅಂಶವಿರುವ ತರಕಾರಿಯಾಗಿದೆ. ಕ್ಯಾರೆಟ್ ಕಣ್ಣಿನ ಆರೋಗ್ಯವನ್ನು ಉತ್ತೇಜಿಸುತ್ತದೆ, ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಕ್ಯಾರೆಟ್‌ನಲ್ಲಿರುವ ಕರಗುವ ಫೈಬರ್ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಹೂಕೋಸು: ಹೂಕೋಸು ಅನೇಕ ಪಾಕವಿಧಾನಗಳಲ್ಲಿ ಬಳಸಲಾಗುವ ಬಹುಮುಖ ತರಕಾರಿಯಾಗಿದೆ. ಕಾರ್ಬೋಹೈಡ್ರೇಟ್ ಸೇವನೆಯನ್ನು ಕಡಿಮೆ ಮಾಡಲು ಪ್ರಯತ್ನಿಸುವವರು ಹೂಕೋಸಿನ ಬಳಕೆ ಹೆಚ್ಚು ಮಾಡುತ್ತಾರೆ. ಇದು ಪೌಷ್ಠಿಕಾಂಶದ ಶಕ್ತಿ ಕೇಂದ್ರವಾಗಿದೆ. ಫೈಬರ್, ವಿಟಮಿನ್ ಸಿ, ವಿಟಮಿನ್ ಕೆ ಮತ್ತು ಫೋಲೇಟ್‌ನಿಂದ ತುಂಬಿದೆ. ಹೂಕೋಸು ಹೃದಯದ ಆರೋಗ್ಯಕ್ಕೆ ಒಳ್ಳೆಯದು.

ಗೆಣಸು: ಗೆಣಸಿನಲ್ಲಿ ಫೈಬರ್ ಅಂಶ ಯಥೇಚ್ಛವಾಗಿದೆ. ಗೆಣಸು ಹೆಚ್ಚಿನ ಫೈಬರ್ ಮತ್ತು ವಿಟಮಿನ್ ಎ ಮತ್ತು ಸಿ ಅಂಶವನ್ನು ಹೊಂದಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.