ಇತಿಹಾಸ ಪ್ರಸಿದ್ಧ ವಂಡಾರು ಕಂಬಳ: ಕೇವಲ ಮನೋರಂಜನೆಯಲ್ಲ, ಜನರ ನಂಬಿಕೆ
ವಂಡಾರು ಕಂಬಳ, ಸುಮಾರು 10 ಎಕರೆ ವಿಸ್ತೀರ್ಣದ ವಿಶಾಲವಾದ ಗದ್ದೆಯಲ್ಲಿ ನಡೆಯುವ ಪುರಾತನ ಕಂಬಳ. ಪಾಂಡವರ ಅಜ್ಞಾತವಾಸದ ಕಥೆಗೆ ಈ ಕಂಬಳ ಸಂಬಂಧವಿದೆ. ಹೆಗ್ಡೆ ಮನೆತನದಿಂದ ಶತಮಾನಗಳಿಂದ ಆಚರಿಸಲ್ಪಡುತ್ತಿದೆ. ಧಾರ್ಮಿಕ ಮಹತ್ವ ಹೊಂದಿರುವ ಈ ಕಂಬಳ, ಜನರ ನಂಬಿಕೆ, ಸಂಸ್ಕೃತಿ ಮತ್ತು ಜೀವನಶೈಲಿಯನ್ನು ಪ್ರತಿಬಿಂಬಿಸುತ್ತದೆ.
1 / 6
ಸುಮಾರು 10 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಕಂಬಳದ ಗದ್ದೆ. ಗದ್ದೆಯ ಒಂದು ಕಡೆಯಲ್ಲಿ ನಿಂತು ಇನ್ನೊಂದು ಕಡೆಗೆ ನೋಡಿದರೆ, ಅಲ್ಲಿರುವವರನ್ನ ಗುರುತಿಸುವುದೇ ಕಷ್ಟ ಅನ್ನುವಷ್ಟು ದೊಡ್ಡ ವಿಶಾಲವಾದ ಕಂಬಳಗದ್ದೆ. ಕಂಬಳಗದ್ದೆ ಇಷ್ಟು ವಿಶಾಲವಾಗಿದೆ ಎಂದರೆ ಅದರ ಐತಿ ಏನಿರಬಹುದು ಅಂದರೆ ಇದು ಕರಾವಳಿಯ ಸಾಂಪ್ರದಾಯಿಕ ಕಂಬಳಗಳ ಪೈಕಿ ಅತೀ ಪುರಾತನ ಹಾಗೂ ಪ್ರಸಿದ್ಧವಾದ ವಂಡಾರು ಕಂಬಳ.
2 / 6
ಹೌದು.. ಇಲ್ಲಿ ಒಂದಿಡೀ ಊರಿನ ಹಬ್ಬ, ಜಾತ್ರೆಯ ರೂಪದಲ್ಲಿ ಕಂಬಳ ನಡೆಯುತ್ತಿದೆ. ವಂಡಾರು ಕಂಬಳ ಊರ ಜನರ ಧಾರ್ಮಿಕ ಮಹತ್ವ, ಸಾಮೂಹಿಕ ಪಾಲ್ಗೊಳ್ಳುವಿಕೆ, ಮನೆತನದ ಗೌರವದ ಸಂಕೇತ. ಧಾರ್ಮಿಕ ಕಟ್ಟುಕಟ್ಟಳೆಯೊಂದಿಗೆ ಗ್ರಾಮೀಣ ಸೊಗಡನ್ನು ಸಾರುವ, ಜನರ ಜೀವನ, ಸಂಸ್ಕೃತಿಯನ್ನು ಬಿಂಬಿಸುವ ಕಂಬಳ ಇದಾಗಿದೆ. ಕುಂದಾಪುರದಿಂದ ಸುಮಾರು 30 ಕಿ.ಮೀ. ದೂರದ ವಂಡಾರಿನಲ್ಲಿ ನಡೆಯುವ ಈ ಕಂಬಳಕ್ಕೆ ಪುರಾತನ ಹಿನ್ನೆಲೆ ಇದೆ.
3 / 6
ಪಾಂಡವರು ಒಂದು ವರ್ಷದ ಅಜ್ಞಾತವಾಸದ ಸಮಯದಲ್ಲಿ ದಿನಕ್ಕೊಂದು ಒಳ್ಳೆಯ ಕೆಲಸ ಮಾಡಬೇಕು ಅನ್ನುವುದು ಶಿವನ ಆಜ್ಞೆಯಾಗಿರುತ್ತದೆ. ಅದರಂತೆ ಒಂದು ದಿನ ರಾತ್ರಿ 5 ಎಕ್ರೆ ವಿಸ್ತೀರ್ಣದ ಪ್ರದೇಶದಲ್ಲಿ ವಿಶಾಲವಾದ ಕೋಟೇಶ್ವರ ದೇವಸ್ಥಾನದ ಕೋಟಿತೀರ್ಥ ಪುಷ್ಕರಣಿಯನ್ನು ನಿರ್ಮಿಸುತ್ತಾರೆ. ಅದು ಅರ್ಧ ರಾತ್ರಿಗೆ ಮುಗಿಯುತ್ತದೆ. ಅದಕ್ಕೆ ಅಲ್ಲಿಂದ ವಂಡಾರಿಗೆ ಸುರಂಗ ಮಾರ್ಗದ ಮೂಲಕ ನಿಗಳೇಶ್ವರನ ಮೂಲಕ ಬಂದು ಅಲ್ಲಿ 10 ಎಕ್ರೆ ವಿಸ್ತೀರ್ಣದ ಕಂಬಳ ಗದ್ದೆಯನ್ನು ನಿರ್ಮಿಸುತ್ತಾರೆ.
4 / 6
ವಂಡಾರಿನ ಕಂಬಳಗದ್ದೆಯು ಇಲ್ಲಿನ ಹೆಗ್ಡೆ ಮನೆತನದ್ದಾಗಿದ್ದು, ಅವರೇ ಶತಮಾನಗಳಿಂದಲೂ ಈ ಹರಕೆಯ ಕಂಬಳ ನಡೆಸಿಕೊಂಡು ಬರುತ್ತಿದ್ದಾರೆ. ಮನೆಯ ದೇವರು ತುಳಸಿ ಅಮ್ಮ. ತಿರುಪತಿಯಿಂದ ಬಂದಿರುವುದಾಗಿ ಪ್ರತೀತಿಯಿದೆ. ಉಡುಪಿ ಜಿಲ್ಲೆಯ ವಿವಿಧೆಡೆಗಳಿಂದ ಇಲ್ಲಿಗೆ ಕೋಣಗಳು ಬರುತ್ತವೆ. ಹಿಂದೆ ನೂರಿನ್ನೂರು ಜೋಡಿ ಕೋಣಗಳು ಬರುತ್ತಿದ್ದವು. ಈಗ 50-60 ಜೋಡಿ ಬರುತ್ತವೆ. ವಾದ್ಯ, ಚೆಂಡೆಯೊಂದಿಗೆ ಕಂಬಳ ಗದ್ದೆಗೆ ಕೋಣಗಳನ್ನು ಕರೆತರಲಾಗುತ್ತದೆ.
5 / 6
ಕೋಣಗಳು ಮಾತ್ರವಲ್ಲದೆ ದನಕರುಗಳಿಗೆ ಅನಾರೋಗ್ಯ, ತೊಂದರೆ ಉಂಟಾಗದಂತೆ ಹರಕೆ ಸಲ್ಲಿಸುವ ಸಂಪ್ರದಾಯವಿದೆ. ಜಾನುವಾರುಗಳನ್ನು ಗದ್ದೆಗೆ ಇಳಿಸಿ, ಸುತ್ತು ಹಾಕಿಸಿ, ಹರಕೆ ಸಲ್ಲಿಸುತ್ತಾರೆ. ಮಕ್ಕಳನ್ನೂ ಗದ್ದೆಗೆ ಇಳಿಸಿ, ನೀರಿನ ಪ್ರೋಕ್ಷಣೆ ಮಾಡುತ್ತಾರೆ. ಕೊಡಿ ಹಬ್ಬದಲ್ಲಿರುವಂತೆ ಕಂಬಳ ದಿನ ಇಲ್ಲಿಗೆ ಬಂದು ಕಂಬಳ ಗದ್ದೆಯಲ್ಲಿ ಸುತ್ತು ಹಾಕಿ ಅಕ್ಕಿ ಹಾಕಿಕೊಂಡು ಹೋಗುವ ಕ್ರಮವೂ ಇದೆ.
6 / 6
ವಂಡಾರಿನಲ್ಲಿ ಕಂಬಳ ಕೇವಲ ಮನೋರಂಜನೆ ಮಾತ್ರವಲ್ಲ, ಇದು ಜನರ ನಂಬಿಕೆಯ ಆಚರಣೆ. ಸಾವಿರ ವರ್ಷಗಳ ಇತಿಹಾಸವಿರುವ ಈ ಕಂಬಳ ಇನ್ನಷ್ಟು ಸಹಸ್ರ ವರ್ಷಗಳ ಕಾಲ ನಡೆಯಲಿ ಎನ್ನುವುದೇ ಎಲ್ಲರ ಆಶಯವಾಗಿದೆ.