
ಆಂಧ್ರ ಪ್ರದೇಶದ ದೊಡ್ಡ ತಿರುಪತಿಯ ಹಾಗೆ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನಲ್ಲಿರುವ ಚಿಕ್ಕತಿರುಪತಿಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯವು ಹೆಚ್ಚು ಪ್ರಸಿದ್ದಿ ಪಡೆದ ದೇವಾಲಯವಾಗಿದೆ.

ಅದರಂತೆ ಇಂದು(ಬುಧವಾರ) ಮುಜರಾಯಿ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಪ್ರಸಿದ್ದ ಚಿಕ್ಕ ತಿರುಪತಿಯ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯದ ಹುಂಡಿ ಎಣಿಕೆಯನ್ನ ಮಾಡಲಾಯಿತು.

ಪ್ರತಿ ಮೂರು ತಿಂಗಳಿಗೊಮ್ಮೆ ಅನ್ನದಾನ ಹುಂಡಿ ಎಣಿಕೆ ಕಾರ್ಯ ನಡೆಯುತ್ತದೆ. ಅದರಂತೆ ಈ ಬಾರಿ ಹುಂಡಿಯಲ್ಲಿ 40 ಲಕ್ಷದ 19 ಸಾವಿರದ 599 ರೂಪಾಯಿ ನಗದು ಹಾಗೂ 24 ಗ್ರಾಂ ಚಿನ್ನ, 129 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ.

ಇನ್ನು ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯ ತಮಿಳುನಾಡು ಗಡಿ ಭಾಗದಲ್ಲಿರುವುದರಿಂದ ಬೆಂಗಳೂರು ಸೇರಿದಂತೆ ತಮಿಳುನಾಡಿನಿಂದ ಕೂಡ ಸಾವಿರಾರು ಭಕ್ತರು ಸ್ವಾಮಿಯ ದರ್ಶನಕ್ಕೆ ಬರುತ್ತಾರೆ.

ಇಲ್ಲಿ ಪ್ರತಿ ವರ್ಷ ನಡೆಯುವ ಬ್ರಹ್ಮ ರಥೋತ್ಸವ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುತ್ತಾರೆ. ಜೊತೆಗೆ ತಮ್ಮ ಇಷ್ಟಾರ್ಥಗಳನ್ನು ದೇವರಲ್ಲಿ ಬೇಡಿಕೊಳ್ಳುತ್ತಾರೆ.

ಇತ್ತೀಚೆಗೆ ಬ್ರಹ್ಮ ರಥೋತ್ಸವ ಸಂಚರಿಸುವ ರಸ್ತೆಯನ್ನು ಸುಸಜ್ಜಿತವಾಗಿ ಕಾಂಕ್ರಿಟ್ ರಸ್ತೆಯನ್ನಾಗಿ ನಿರ್ಮಿಸುವ ಸಲುವಾಗಿ ಸುಮಾರು 2.50 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆಯನ್ನಾಗಿ ನಿರ್ಮಿಸಲು ಅನುಮೋದನೆ ನೀಡಿ ಭೂಮಿ ಪೂಜೆ ಸಹ ಮಾಡಲಾಗಿತ್ತು.